2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯನ್ನಾಗಿಸಿಕೊಂಡಿತ್ತು. ಅದರಲ್ಲೂ ಕೆಲವು ಹೈವೋಲ್ಟೇಜ್ ಕ್ಷೆತ್ರಗಳಲ್ಲಿ ಗೆಲ್ಲಲೇಬೇಕೆಂದು ಛಲ ತೊಟ್ಟಿತ್ತು. ಟಿಕೆಟ್ ಸಿಗಲಿಲ್ಲವೆಂದು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹಾರಿದ್ದ ಅಥಣಿಯ ಲಕ್ಷ್ಮಣ ಸವದಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ನ ಜಗದೀಶ್ ಶೆಟ್ಟರ್, ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿದ್ದ ಸಿದ್ದರಾಮಯ್ಯ ಸ್ಪರ್ಧಿಸಿದ್ದ ವರುಣಾ, ಡಿ ಕೆ ಶಿವಕುಮಾರ್ ಸ್ಪರ್ಧಿಸಿರುವ ಕನಕಪುರ ಮುಂತಾದ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂದು ಬಿಜೆಪಿ ಹಠ ತೊಟ್ಟಿತ್ತು.
ಬಿಜೆಪಿ ವರಿಷ್ಠರು ಕೂಡ ಆ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಿದ್ದರು. ಅಮಿತ್ ಶಾ, ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ ಬಂದಾಗ ಈ ಪೈಕಿ ಕೆಲವು ಕ್ಷೇತ್ರಗಳಲ್ಲಿ ರ್ಯಾಲಿ ನಡೆಸಿ ಬಿಜೆಪಿ ಪರ ಮತ ಯಾಚನೆ ಮಾಡಿದ್ದರು. ಆದರೆ, ಈ ಕ್ಷೇತ್ರಗಳ ಪೈಕಿ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುವ ಹಾದಿಯಲ್ಲಿದ್ದು, ಮುಖಭಂಗ ಅನುಭವಿಸಿದೆ.
ಕನಕಪುರದಲ್ಲಿ ಡಿ ಕೆ ಶಿವಕುಮಾರ್, ಅಥಣಿಯಲ್ಲಿ ಲಕ್ಷ್ಮಣ ಸವದಿ, ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲುವ ಹಾದಿಯಲ್ಲಿದ್ದಾರೆ. ಡಿ ಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್, ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸೋಲುವ ಹಾದಿಯಲ್ಲಿದ್ದಾರೆ.
ಇವುಗಳ ಜೊತೆಗೆ ಹಾಸನ ಕ್ಷೇತ್ರದ ಬಗ್ಗೆಯೂ ಬಿಜೆಪಿ ವಿಶೇಷ ಗಮನ ಹರಿಸಿತ್ತು. ಜೆಡಿಎಸ್‌ನ ಪ್ರೀತಂ ಗೌಡ ವಿರುದ್ಧ ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಸ್ಪರ್ಧಿಸಿದ್ದು, ಇದೂ ಕೂಡ ಪ್ರತಿಷ್ಠೆಯ ಕಣವಾಗಿತ್ತು. ಪ್ರೀತಂ ಗೌಡರದ್ದು ಅತಿಯಾಯಿತು ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದ್ದವು. ಹೀಗಾಗಿ ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಖುದ್ದಾಗಿ ಸ್ವರೂಪ್ ಪರ ಪ್ರಚಾರ ಮಾಡಿ, ಅವರನ್ನು ತನ್ನ ಮೂರನೇ ಮಗ ಎಂದು ಚುನಾವಣಾ ಭಾಷಣ ಮಾಡಿದ್ದರು. ಈ ಕ್ಷೇತ್ರದಲ್ಲಿಯೂ ಕೂಡ ಬಿಜೆಪಿ ಹಿನ್ನಡೆ ಸಾಧಿಸಿದ್ದು, ಜೆಡಿಎಸ್‌ನ ಸ್ವರೂಪ್ ಗೆಲುವಿನ ಸನಿಹದಲ್ಲಿದ್ದಾರೆ.
ಬಿಜೆಪಿಗೆ ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಕ್ಷೇತ್ರಗಳ ಪೈಕಿ ಹುಬ್ಬಳ್ಳಿ ಧಾರವಾಡ ಮಾತ್ರ ಅವರ ಕೈಹಿಡಿಯುವ ಸಾಧ್ಯತೆಯಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಗದೀಶ್ ಶೆಟ್ಟರ್ ಏಳನೇ ಸುತ್ತು ಮುಗಿದಾಗ 18664 ಮತಗಳಿಂದ ಹಿನ್ನಡೆಯಲ್ಲಿದ್ದರು.
ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ರಾಜ್ಯದ ಮತದಾರರು ಬಿಜೆಪಿಗೆ ಮುಖಭಂಗ ಮಾಡಿದ್ದಾರೆ; ಆಡಳಿತ ವಿರೋಧಿ ಅಲೆಗೆ ಮತ ಚಲಾಯಿಸಿದ್ದಾರೆ ಎನ್ನುವ ವಿಶ್ಲೇಷಣೆಗಳು ಕೇಳೀಬರುತ್ತಿವೆ.