ಎಲ್ಲ ಬೂತ್ ಬಳಿ ಖಾಲಿ ಅಡುಗೆ ಅನಿಲ ಸಿಲಿಂಡರ್ ಇಟ್ಟು ಪೂಜೆ ಮಾಡಿ ಮತದಾನ ಮಾಡುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದ್ದೇನೆ. ಪ್ರಧಾನಿ ಅವರ ಮಾರ್ಗದರ್ಶನದಂತೆ ಈ ಸೂಚನೆ ನೀಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಕನಕಪುರದಲ್ಲಿ ಮತದಾನ ಮಾಡುವ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ಕೆಂಕೇರಮ್ಮ ದೇವಿ ನಮ್ಮ ಮನೆ ದೇವರು. ನಾಮಪತ್ರ ಸಲ್ಲಿಕೆ ಮುನ್ನ ನಾವು ಇಲ್ಲಿ ಪೂಜೆ ಸಲ್ಲಿಸಿದ್ದೆವು. ಈಗ ಮತದಾನ ಮುನ್ನ ಪೂಜೆ ಸಲ್ಲಿಸುತ್ತಿದ್ದೇವೆ. ಇಲ್ಲಿಂದ ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ ನಂತರ ಮತದಾನ ಮಾಡುತ್ತಿದ್ದೇವೆ” ಎಂದರು.
“ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವು ನೀಡಲು ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆ ಘೋಷಿಸಿದೆ. ಇಂದು ರಾಜ್ಯದಲ್ಲಿ ಬದಲಾವಣೆ ಮಾಡಿಕೊಳ್ಳುವ ದಿನ. ನಮ್ಮ ಭವಿಷ್ಯ ನಾವೇ ಬರೆದುಕೊಳ್ಳುವ ದಿನ. ನಮ್ಮ ಗ್ಯಾರಂಟಿ ಯೋಜನೆಗಳಿಗೆ ಮುದ್ರೆ ಒತ್ತುವ ದಿನ” ಎಂದರು.
“ನನ್ನ ಪುತ್ರ ಹಾಗೂ ಪುತ್ರಿ ಇಬ್ಬರೂ ಈ ಬಾರಿ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಹೊಸ ಮತದಾರರಿಗೆ ಮತದಾನದ ಹುಮ್ಮಸ್ಸು ಇರುತ್ತದೆ. ರಾಜ್ಯದ ಎಲ್ಲ ಯುವ ಮತದಾರರಿಗೆ ಶುಭ ಕೋರಿ, ರಾಜ್ಯಕ್ಕೆ ದೊಡ್ಡ ಬದಲಾವಣೆ ತರುವ ಜವಾಬ್ದಾರಿ ಇದ್ದು ಅದನ್ನು ಸಮರ್ಥವಾಗಿ ನಿಭಾಯಿಸುವಂತೆ ಸಲಹೆ ನೀಡುತ್ತೇನೆ. ಯುವ ಮತದಾರರು ಪ್ರಜ್ಞಾವಂತರಾಗಿದ್ದು, ಈ ದುರಾಡಳಿತವನ್ನು ಕೊನೆಗಾಣಿಸುತ್ತಾರೆ ಎಂದು ಭಾವಿಸಿದ್ದೇನೆ. ಈ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ರಾಜೀವ್ ಗಾಂಧಿ ಅವರು. ಈ ಯುವ ಮತದಾರರು ಪ್ರಜಾಪ್ರಭುತ್ವದ ಆಚರಣೆ ಮಾಡಲಿ” ಎಂದು ತಿಳಿಸಿದರು.
ಸಚಿವ ಅಶೋಕ್ ನಿಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದು, ಎಷ್ಟು ಅಂತರದಿಂದ ಗೆಲುವು ಸಾಧಿಸುತ್ತೀರಿ ಎಂದು ಕೇಳಿದಾಗ,”ಅಶೋಕ್ ಅವರು, ಮುಖ್ಯಮಂತ್ರಿಗಳು ಇಲ್ಲಿ ಬಂದು ಪ್ರಚಾರ ಮಾಡಿದ್ದಾರೆ. ಇದು ಗುಪ್ತ ಮತದಾನ, ಯಾರು ಗೆಲ್ಲುತ್ತಾರೆ ಎಂದು 13ರಂದು ನೋಡೋಣ” ಎಂದು ತಿಳಿಸಿದರು.