ಸುಧಾಕರ್ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದ ಎಂಟಿಬಿ
ಮನೆ ದೇವರ ಮೇಲೆ ಆಣಿ ಮಾಡಲಿ ಎಂದ ಮಾಜಿ ಸಚಿವ
ವಿಪಕ್ಷ ನಾಯಕ ಸಿದ್ದರಾಮಯ್ಯರಿಂದಲೇ ಮೈತ್ರಿ ಸರ್ಕಾರ ಪತನವಾಯಿತು ಎಂದಿದ್ದ ಮಾಜಿ ಸಚಿವ ಡಾ. ಸುಧಾಕರ್ ಹೇಳಿಕೆಗೆ ಅವರ ಗೆಳೆಯರ ಬಳಗದಲ್ಲೇ ಆಕ್ಷೇಪ ವ್ಯಕ್ತವಾಗಿದೆ.
ಮೈತ್ರಿ ಸರ್ಕಾರ ಪತನದ ವೇಳೆ ಸುಧಾಕರ್ಗೆ ಜೊತೆಯಾಗಿ ಬಾಂಬೆ ಟೀಂ ಸೇರಿದ್ದ ಮತ್ತೋರ್ವ ಸಚಿವ ಎಂಟಿಬಿ ನಾಗರಾಜ್ ಈಗ ಸುಧಾಕರ್ ಹೇಳಿಕೆಯನ್ನು ಅಲ್ಲಗೆಳೆದಿದ್ದಾರೆ.
ತಾವೂ ಕೂಡ ಟ್ವೀಟ್ ಮೂಲಕ ಸುಧಾಕರ್ ವಿಚಾರ ಪ್ರಸ್ತಾಪಕ್ಕೆ ತಿರುಗೇಟು ನೀಡಿರುವ ಅವರು ಆರೋಗ್ಯ ಸಚಿವರ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಎಂದಿದ್ದಾರೆ.
ಇದೇ ವೇಳೆ ಸುಧಾಕರ್ಗೆ ಸವಾಲೆಸೆದಿರುವ ನಾಗರಾಜ್, ಸಿದ್ದರಾಮಯ್ಯ ರವರನ್ನು ನಾನು ಕೂಡ ಹಲವಾರು ಬಾರಿ ಭೇಟಿ ಮಾಡಿ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಹಾಗೂ ನಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಏನು ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಹೇಳಿಕೊಂಡಾಗ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ ಎಂದು ಹೇಳಿದ್ದರು. ಅದನ್ನು ಬಿಟ್ಟು ಬೇರೇನನ್ನೂ ಹೇಳಿರಲಿಲ್ಲ. ಇದೇ ಸತ್ಯ ಎಂದಿದ್ದಾರೆ.
ಆದರೆ ಇಂದು ಸುಧಾಕರ್ ಟ್ವೀಟ್ ಮಾಡಿರುವ ಮಾತುಗಳು ಸತ್ಯಕ್ಕೆ ದೂರವಾಗಿದೆ. ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಅವರು ಈ ಮಾತುಗಳನ್ನು ಹೇಳಿದ್ದಾರೆನಿಸುತ್ತದೆ. ಅಷ್ಟೊಂದು ನೋವಿದ್ದವರು ಇಷ್ಟು ದಿನ ಏಕೆ ಸುಮ್ಮನಿದ್ದರು? ಎಂದು ಎಂಟಿಬಿ ನಾಗರಾಜ್ ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಕಾಂಗ್ರೆಸ್ ಲಿಂಗಾಯತರಿಗೆ ಯಾವ ಹುದ್ದೆ ನೀಡಲಿದೆ ನೋಡೋಣ: ಬಸವರಾಜ ಬೊಮ್ಮಾಯಿ
ಇನ್ನು ಬಿಜೆಪಿ ಸೇರಲು ಸಿದ್ದರಾಮಯ್ಯ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇತ್ತೆಂದಿರುವ ಸುಧಾಕರ್, ಈ ವಿಚಾರವನ್ನು ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುವರೆ? ಇಷ್ಟು ದಿನ ಮೌನವಾಗಿದ್ದು?ಈಗ ಇದರ ಪ್ರಸ್ತಾಪ ಮಾಡಿರುವುದರ ಹಿಂದಿನ ಮರ್ಮವೇನು ಎಂದು ಎಂಟಿಬಿ ನಾಗರಾಜ್ ಸುಧಾಕರ್ ಪ್ರಶ್ನಿಸಿದ್ದಾರೆ.