“ಬಿಜೆಪಿ ಸರ್ಕಾರ ರೈತರನ್ನು ನಾಶಮಾಡುವಂತಹ ಕಾಯ್ದೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ, ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುತ್ತೇವೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ.
ಬೆಂಗಳೂರಿನ ಗಾಂಧಿಭವನದಲ್ಲಿ ಬುಧವಾರ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಬಸವರಾಜಪ್ಪ ಬಣ), ಭಾರತೀಯ ಕೃಷಿಕ ಸಮಾಜ, ರೈತ ಕೂಲಿ ಸಂಘ, ಭೂಮಿ ಮತ್ತು ವಸತಿ ಹಕ್ಕು, ವಂಚಿತರ ಹೋರಾಟ ಸಮಿತಿ, ಗಾಮೀಣ ಕೂಲಿ ಕಾರ್ಮಿಕರ ಸಂಘಟನೆ ಹಾಗೂ ಕರ್ನಾಟಕ ಜನಶಕ್ತಿ ಸೇರಿದಂತೆ ಒಟ್ಟು 15 ಸಂಘಟನೆಗಳು ಸೇರಿ ರಾಜಕೀಯ ಪಕ್ಷಗಳ ಮುಂದೆ ರೈತ ಪ್ರಣಾಳಿಕೆಯನ್ನು ಮಂಡಿಸಿದವು. ರೈತ ಸಮುದಾಯದ 15 ಹಕ್ಕೊತ್ತಾಯಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಪ್ಪಿ ಸಹಿ ಮಾಡಿವೆ.
ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, “ನಾವು ಭಿನ್ನವಾದ ಆಡಳಿತ ನಡೆಸಲು ಬಯಸುತ್ತೇವೆ. ರೈತರ ಋಣ ನಮ್ಮ ಮೇಲಿದೆ. ಜಾನುವಾರು ಹತ್ಯೆ ನಿಯಂತ್ರಣ ಕಾಯ್ದೆ ಹೆಸರಲ್ಲಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಹಾಗಾಗಿ, ಆ ಕಾಯ್ದೆಯ ಜೊತೆಗೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಬಹುಮುಖ್ಯವಾಗಿ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ಕಿತ್ತುಹಾಕುತ್ತೇವೆ” ಎಂದು ತಮ್ಮ ಪಕ್ಷದ ನಿಲುವನ್ನು ದೃಢಪಡಿಸಿದರು.
ಇದೇ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಜನತಾ ದಳ ಪಕ್ಷದ ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಪ್ರಣಾಳಿಕೆ ಸಮಿತಿಯ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, “ರಾಜ್ಯದೊಳಗೆ ನಂದಿನಿ ಜಾಗಕ್ಕೆ ಅಮೂಲ್ ಪ್ರವೇಶಕ್ಕೆ ಯಾವುದೇ ಅವಕಾಶ ಇಲ್ಲ. ಬದಲಾಗಿ ಕೆಎಂಎಫ್ ಅಡಿಯಲ್ಲಿ ಬರುವ 18 ಜಿಲ್ಲಾ ಹಾಲು ಒಕ್ಕೂಟಗಳಿಗೆ ಉತ್ತೇಜನ ನೀಡುವ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇವೆ” ಎಂಬ ನಿಲುವನ್ನು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಯಶವಂತಪುರ ಕ್ಷೇತ್ರ | ತೆನೆ ಪಕ್ಷದ ಅನುಕಂಪದ ಅಲೆಯಲ್ಲಿ ಕೊಚ್ಚಿ ಹೋಗುವುದೇ ಕಮಲ!
“ರೈತರ ಪರ ನಮ್ಮ ಪಕ್ಷ ಕೂಡ ಪ್ರಣಾಳಿಕೆ ಸಿದ್ದಪಡಿಸಿದೆ. ರೈತರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ₹2 ಲಕ್ಷ ಸಹಾಯಧನ ಸೌಲಭ್ಯ, ಮುಳುಗಡೆ ಪ್ರದೇಶದ ಜನರಿಗೆ ಪುನರ್ವಸತಿಯಂತಹ ಮಹತ್ವದ ಯೋಜನೆಗಳನ್ನು ತರುವ ತೀರ್ಮಾನ ಮಾಡಲಾಗಿದೆ. ಅಲ್ಲದೆ, ರೈತ ಸಮುದಾಯದ ಎಲ್ಲ ಹಕ್ಕೊತ್ತಾಯಗಳನ್ನು ಒಪ್ಪಿದ್ದು, ಪಕ್ಷದ ನಾಯಕರೊಂದಿಗೆ ಚರ್ಚಿಸಿ ಅಳವಡಿಸಿಕೊಂಡು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ” ಎಂದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಾಜೀವ್ ಶುಕ್ಲಾ, ರಘುನಂದನ್, ರೈತ ನಾಯಕರಾದ ಬಡಗಲಪುರ ನಾಗೇಂದ್ರ, ಬಯ್ಯಾರೆಡ್ಡಿ, ಟಿ ಯಶವಂತ, ಆರ್ಥಿಕ ತಜ್ಞರಾದ ಪ್ರಕಾಶ್ ಕಮ್ಮರಡಿ, ಹನಾನ್ ಮುಲ್ಲಾ, ಮಂಜುನಾಥ್, ಕಾರ್ಮಿಕ ಸಂಘಟನೆಯ ನಿಂಗಮ್ಮ, ಮರಿಯಪ್ಪ, ಡಿಎಸ್ ಪೂಜಾರ್ ಹಾಗೂ ರೈತ ಮತ್ತು ಕಾರ್ಮಿಕ ಸಂಘಟನೆಯ ಎಲ್ಲ ಪ್ರಮುಖ ನಾಯಕರು ಚರ್ಚೆಯಲ್ಲಿ ಭಾಗವಹಿಸಿದ್ದರು.