ರಾಜ್ಯ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. 135 ಸ್ಥಾನಗಳು ಕಾಂಗ್ರೆಸ್‌ಗೆ ಲಭಿಸಿದ್ದು, ಸರ್ಕಾರ ರಚನೆಗೆ ಕಸರತ್ತು ಆರಂಭವಾಗಿದೆ.
ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಚರ್ಚೆ ಈಗ ಗರಿಗೆದರಿದೆ. ಈ ಹಿನ್ನೆಲೆಯಲ್ಲಿ ಇಂದು (ಮೇ 14) ಸಂಜೆ 6ಕ್ಕೆ ವಸಂತನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಈ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ತಪ್ಪದೇ ಭಾಗವಹಿಸಬೇಕು ಎಂದು ಕೆಪಿಸಿಸಿ ಈಗಾಗಲೇ ಸೂಚಿಸಿದೆ.
ಈ ಸಭೆಯಲ್ಲಿ ವೀಕ್ಷಕರ ಸಮ್ಮುಖದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ.
ಮೇ 15ರಂದು ಪ್ರಮಾಣ ವಚನ
ಇಂದಿನ ಸಿಎಲ್‌ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಆಯ್ಕೆಯಾದ ಮುಖ್ಯಮಂತ್ರಿ ಮೇ 15ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಚುನಾವಣಾ ಪೂರ್ವದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಮುಖ್ಯಮಂತ್ರಿ ಹುದ್ದೆಗೆ ಭಾರೀ ಪೈಪೋಟಿ ನಡೆದಿತ್ತು. ಇಬ್ಬರನ್ನು ಸಮಾಧಾನಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ಮಾಡುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿತ್ತು. ಇಂದಿನ ಸಭೆಯಲ್ಲಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಶಾಸಕಾಂಗ ಪಕ್ಷದ ಆಯ್ಕೆಯ ಜೊತೆಗೆ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ, ಲಿಂಗಾಯತ ಸಮುದಾಯದಿಂದ ಎಂ ಬಿ ಪಾಟೀಲ, ದಲಿತ ಸಮುದಾಯದಿಂದ ಜಿ ಪರಮೇಶ್ವರ ಅಥವಾ ಕೆ ಎಚ್ ಮುನಿಯಪ್ಪ ಹಾಗೂ ಒಕ್ಕಲಿಗ ಸಮುದಾಯದಿಂದ ಡಿ ಕೆ ಶಿವಕುಮಾರ್ ಅವರಿಗೆ ನೀಡುವ ಬಗ್ಗೆ ಹೈಕಮಾಂಡ್ ಆಸಕ್ತಿ ತೋರಿದೆ ಎನ್ನಲಾಗಿದೆ.