ಬಿಜೆಪಿಯಿಂದ ʼಆಪರೇಷನ್ ಕಮಲʼ ನಡೆಯಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಗೆಲ್ಲುವ ಶಾಸಕರ ರಕ್ಷಣೆಗೆ ಮುಂದಾಗಿದೆ.
ಮತ ಎಣಿಕೆಯಲ್ಲಿ ಕಾಂಗ್ರೆಸ್ ಬಹುಮತದತ್ತ ದಾಪುಗಾಲಿಟ್ಟಿದ್ದು, ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತನ್ನ ಗೆಲ್ಲುವ ಶಾಸಕರನ್ನು ಗುರುತಿಸಿ, ಅವರನ್ನು ರಕ್ಷಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗೆ ಮೂವರು ಉಸ್ತುವಾರಿಗಳನ್ನು ನೇಮಿಸಿದೆ.
ಆಯಾ ಜಿಲ್ಲೆಯಲ್ಲಿ ಕಾಂಗ್ರೆಸ್ ಹುರಿಯಾಳುಗಳು ಗೆಲ್ಲುತ್ತಿದ್ದಂತೆ ಅವರನ್ನು ಬೆಂಗಳೂರಿಗೆ ಕರೆತರುವ ಜವಾಬ್ದಾರಿಯನ್ನು ಈ ಉಸ್ತುವಾರಿಗಳಿಗೆ ವಹಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ಬಂದಲ್ಲಿ ಶನಿವಾರ ಇಲ್ಲವೇ ಭಾನುವಾರವೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.
ಬಹುಮತಕ್ಕೆ ಕೆಲ ಸ್ಥಾನಗಳ ಕೊರತೆ ಕಂಡು ಬಂದರೆ ಸರ್ಕಾರ ರಚನೆಗೆ ಬೇಕಾದ ಯೋಜನೆಗಳನ್ನು ರೂಪಿಸಿದ್ದು, ಮತ ಎಣಿಕೆ ನೋಡುತ್ತ ಗೆಲ್ಲುವ ಪಕ್ಷೇತರ ಅಭ್ಯರ್ಥಿಗಳ ಸಂಪರ್ಕ ಸಾಧಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಈ ಎಲ್ಲ ವಿಚಾರಗಳ ಬಗ್ಗೆ ಈಗಾಗಲೇ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಜಕೀಯ ತಂತ್ರಗಾರ ಸುನೀಲ್ ಕನುಗೋಲು ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ.