ಇಡೀ ರಾಜ್ಯವೇ ಎದುರು ನೋಡುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ ಇಂದೇ ನಡೆಯಲಿದ್ದು, 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 224 ಮಂದಿ ವಿಧಾನಸಭೆ ಮೆಟ್ಟಿಲೇರಿದರೆ, ಉಳಿದವರು ಮತ್ತೆ ಐದು ವರ್ಷಗಳ ಕಾಲ ಚುನಾವಣೆಗಾಗಿ ಕಾಯಬೇಕಾಗುತ್ತದೆ.
ಶನಿವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ಯಾವ ಪಕ್ಷ ಬಹುಮತ ಪಡೆದು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಸಮೀಕ್ಷೆಗಳು ನಿಜವಾಗಿ ಕಾಂಗ್ರೆಸ್ ಅಧಿಕಾರಕ್ಕೇರುತ್ತದೆಯೇ ಅಥವಾ ಅತಂತ್ರ ವಿಧಾನಸಭೆ ನಿರ್ಮಾಣವಾಗುವುದೇ ಎಂಬುದು ಸಂಜೆಯೊಳಗೆ ತಿಳಿಯಲಿದೆ.
ಮೇ 10ರಂದು ನಡೆದ ಮತದಾನದಲ್ಲಿ ರಾಜ್ಯದ ಒಟ್ಟು 5,30,85,566 ಮತದಾರರ ಪೈಕಿ 3,88,51,807 ಮಂದಿ ಮತದಾನ ಮಾಡಿದ್ದಾರೆ. ಕಣದಲ್ಲಿದ್ದ 2,615 ಅಭ್ಯರ್ಥಿಗಳ ತಮ್ಮ ಭವಿಷ್ಯ ಏನಾಗಲಿದೆ ಎಂದು ತವಕದಲ್ಲಿದ್ದಾರೆ. ಮತದಾರರೂ ಕೂಡ ತಮ್ಮ ಕ್ಷೇತ್ರವನ್ನು ಯಾರು ಪ್ರತಿನಿಧಿಸಬಹುದೆಂದು ತಿಳಿಯಲು ಕಾತುರಾಗಿದ್ದಾರೆ.
ರಾಜ್ಯದ 34 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಎಲ್ಲ ಎಣಿಕಾ ಕೇಂದ್ರದಲ್ಲಿ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ಮೊದಲ ಸುತ್ತಿನಲ್ಲಿ ಪೋಸ್ಟಲ್ ಬ್ಯಾಲೆಟ್ ಮತಗಳ ಎಣಿಕೆ ನಡೆಯಲಿದೆ. ಮತ ಎಣಿಕೆ ಕೇಂದ್ರದ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ನಿಯೋಜಿಸಲಾಗಿದೆ.