ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಸಮೀಪದ ಕೊಂಡೇಲಾ ಗ್ರಾಮದ ದುರ್ಗಾ ನಗರದಲ್ಲಿ ರತ್ನ ಶೆಟ್ಟಿ ಎಂಬ ವೃದ್ಧೆ ಅಸಹಜವಾಗಿ ಸಾವನ್ನಪ್ಪಿದ್ದಾರೆ. ಆಕೆಯ ಮಗನೇ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದ್ದು, ವೃದ್ಧೆಯ ಪುತ್ರ ರವಿರಾಜ್ ಶೆಟ್ಟಿ ಎಂಬಾತನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ರತ್ನ ಶೆಟ್ಟಿ ಅವರು ಮಗ ರವಿರಾಜ್ ಜೊತೆ ವಾಸ್ತವ್ಯವಿದ್ದರು. ಆತ ಗಿಡಿಗೆರೆ ಚರ್ಚ್ ಬಳಿಯ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಅನಾರೋಗ್ಯದಿಂದಾಗಿ ಆತ ಕೆಲಸಕ್ಕೆ ಹೋಗಿರಲಿಲ್ಲ. ಶನಿವಾರ ತಾಯಿ ಇದ್ದ ಕೋಣೆಗೆ ಬೀಗ ಹಾಕಿ ಹೊರಗೆ ಹೋಗಿದ್ದಾನೆ.
ಭಾನುವಾರ(ಅ.29) ಬೆಳಗ್ಗೆ ಮನೆಯ ಸುತ್ತಮುತ್ತ ವಾಸನೆ ಬರುತ್ತಿದ್ದರಿಂದ ಅನುಮಾನದಿಂದ ಮನೆಯವರು ಮಹಿಳೆ ಇದ್ದ ಕೊಠಡಿಯ ಕಿಟಕಿಯಲ್ಲಿ ನೋಡಿದಾಗ ಮಹಿಳೆಯ ಮುಖ ಬಟ್ಟೆಯಿಂದ ಮುಚ್ಚಿದ ಸ್ಥಿತಿಯಲ್ಲಿ ಹಾಗೂ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ರವಿರಾಜ್ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.