ಬಿಜೆಪಿ ಮತ್ತು ಸಂಘ ಪರಿವಾರದವರದ್ದು ನಕಲಿ ಹಿಂದುತ್ವದ, ಇವರನ್ನು ಧಿಕ್ಕರಿಸೋಣ ಎಂದು ದಕ್ಷಿಣ ಕನ್ನಡ ಜಿಲ್ಲೆ ಹಿಂದೂ ಜಾತ್ರಾ ಭಕ್ತರ ಸಮಿತಿ ಕರೆಕೊಟ್ಟಿದೆ.
“ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಅಂಗಡಿ ಇಡಬಾರದು ಎಂಬುದು ಬಿಜೆಪಿ ಮತ್ತು ಸಂಘ ಪರಿವಾರದ ನಿಲುವು. ದೇವಸ್ಥಾನ ನೀಡುವ ಬಾಡಿಗೆ ಕಟ್ಟಡ, ಅದರ ಪ್ರಾಂಗಣದೊಳಗೆ, ದೇವಸ್ಥಾನದ ಅಧಿಕೃತ ಸ್ಥಳದಲ್ಲಿ ಅನ್ಯ ಧರ್ಮಿಯರ ಅಂಗಡಿ ಇಡಬಾರದು ಅನ್ನುವ ನಿಯಮ ಸರ್ಕಾರ ಜಾರಿಗೆ ತಂದಿದೆ. ಆದರೆ, ಪ್ರಾಂಗಣದ ಹೊರಗೆ ಯಾರು ಬೇಕಿದ್ದರೂ ವ್ಯಾಪಾರ ಮಾಡಬಹುದು” ಎಂದು ಸಮಿತಿ ಹೇಳಿದೆ.
“ಬಿಜೆಪಿ ಮತ್ತು ಪರಿವಾರದ ಹೋರಾಟ, ಮುಸ್ಲಿಂರು ಜಾತ್ರೆಯ ವೇಳೆ ಸಾರ್ವಜನಿಕ ರಸ್ತೆಯಲ್ಲೂ ವ್ಯಾಪಾರ ಮಾಡಬಾರದು ಅನ್ನುವುದು, ಇದು ಸಂವಿಧಾನ ಬಾಹಿರ. ವ್ಯಕ್ತಿಯ ಬದುಕುವ ಮತ್ತು ಸ್ವಾತಂತ್ರ್ಯದ ಹರಣ. ರಸ್ತೆ ಬದಿಯಲ್ಲಿ ಮುಸ್ಲಿಂರ ವ್ಯಾಪಾರ ನಿರ್ಬಂಧಿಸಲು ಬಿಜೆಪಿ ಪರಿವಾರಕ್ಕೆ ಅಧಿಕಾರ ಕೊಟ್ಟವರು ಯಾರು? ಇದು ಕರ್ನಾಟಕ ಸರ್ಕಾರಕ್ಕೆ ಪರ್ಯಾಯ ಕಾನೂನು ಜಾರಿಗೆ ತಂದಂತೆ. ಇದು ರಾಷ್ಟ್ರ ದ್ರೋಹ” ಎಂದು ಸಮಿತಿ ಕಿಡಿಕಾರಿದೆ.
“ಬಿಜೆಪಿ ಪರಿವಾರ ಇಷ್ಟೊಂದು ಆಸಕ್ತಿಯಿಂದ ಹೋರಾಟ ಮಾಡುತ್ತಿರುವುದು ಯಾಕೆ? ಇದರ ಹಿಂದೆ ವ್ಯಾಪಾರವಿದೆ. ಬಿಜೆಪಿ ಪರಿವಾರದ ಮುಖಂಡರೇ ಅಂಗಡಿಗಳ ಮೇಲೆ ನಿಯಂತ್ರಣ ಸಾಧಿಸುವುದು, ಅಗತ್ಯ ವಸ್ತು ಸರಬರಾಜು ಮಾಡುವುದು, ಆ ಮೂಲಕ ಕಮೀಷನ್ ಪಡೆಯುವುದು ಮೂಲ ಉದ್ದೇಶ. ಸಂಘಟನೆಯ ಕೆಲವು ನಾಯಕರು ಮತ್ತು ಬಿಜೆಪಿ ಮುಖಂಡರದೇ ಅಂಗಡಿ ಹಾಕುವುದು ಅವರ ಉದ್ದೇಶ. ಈಡೀ ಜಾತ್ರೆಯ ಮಾರುಕಟ್ಟೆಯನ್ನು ನಿಯಂತ್ರಣಕ್ಕೆ ಪಡೆದುಕೊಂಡು, ಅಲ್ಲಿ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಮೂಲಕ, ಹಣ ದೋಚುವುದು. ಭಕ್ತರನ್ನು ಶೋಷಣೆ ಮಾಡುವುದು” ಎಂದು ಹೇಳಿದೆ.
“ದೇವಸ್ಥಾನದ ಜಾತ್ರೆಯನ್ನು ಬಿಜೆಪಿಗೆ ಕೊಡುವುದನ್ನು, ಅಲ್ಲಿ ಬಿಜೆಪಿ ಪರ ಪರಿವಾರದವರು ರಾಜಕಾರಣ ಮಾಡುವುದು, ಮುಂದಿನ ಚುನಾವಣೆಗೆ ವೋಟು ಕ್ರೂಡೀಕರಣವನ್ನು ಭಕ್ತರು ವಿರೋಧಿಸಬೇಕು. ಯಾವುದೋ ರಸ್ತೆಯ ಮೂಲೆಗೂ, ಮುಸ್ಲಿಂ ವ್ಯಾಪಾರ ನಿಷೇಧ, ದಕ್ಷಿಣ ಕನ್ನಡ ಜಿಲ್ಲೆಯ ಸಾಮರಸ್ಯಕ್ಕೆ ಬೆಂಕಿ ಇಡುವ ಕೆಲಸ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಬಜರಂಗದಳದ ಶರಣ್ ಪಂಪವೆಲ್, ಮುಸ್ಲಿಂ ಕಟ್ಟಡಗಳಲ್ಲಿ ಪಡೆದ ಗುತ್ತಿಗೆ ನಿಲ್ಲಿಸಲಿ. ವಿ.ಹಿ.ಪರಿಷತ್ತಿನ ಎಂ.ಬಿ. ಪುರಾಣಿಕ ತನ್ನ ಕಾಲೇಜಿನಲ್ಲಿ ಮುಸ್ಲಿಂ ವಿಧ್ಯಾರ್ಥಿಗಳ ಪ್ರವೇಶ ನಿಲ್ಲಿಸಲಿ. ಬಿಜೆಪಿಯ ಮತ್ತು ಅಲ್ಪಸಂಖ್ಯಾತ ಘಟಕವನ್ನು, ತಕ್ಷಣ ವಿಸರ್ಜನೆ ಮಾಡಲಿ. ಅಲ್ಲಿ ಕೂಡಾ ಲವ್ ಜಿಹಾದ್ ಆಗುವ ಸಾಧ್ಯತೆ ಇರಬಹುದಲ್ಲವೇ? ಬಿಜೆಪಿಯ ಎಲ್ಲಾ ಮುಸ್ಲಿಂ ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ. ಬಿಜೆಪಿಯ ವ್ಯಾಪಾರಿಗಳು ಹೊಟೇಲ್, ಅಂಗಡಿಗಳು ಮುಸ್ಲಿಂರಿಗೆ ಪ್ರವೇಶವಿಲ್ಲವೆಂದು ಬೋರ್ಡ್ ಹಾಕಲಿ. ಅಲ್ಲೂ ಲವ್ ಜಿಹಾದ್ ಆಗಬಹುದಲ್ಲವೇ. ಬಿಜೆಪಿ ಪರಿವಾರದ ಹೋರಾಟ ಅದರ ಮುಖಂಡರು ಹಣ ಮಾಡಲು ಆಡುವ ನಾಟಕ” ಎಂದು ಹೇಳಿದೆ.
“ಕರಾವಳಿಯನ್ನು ಸದಾ ಕೋಮು ಸೂಕ್ಷ್ಮ ಮಾಡಿ ಚುನಾವಣೆ ಗೆಲ್ಲುವ ಸಂಚು. ಹಿಂದುತ್ವದ ಹೆಸರಿನಲ್ಲಿ ದೇವಸ್ಥಾನಗಳನ್ನು, ಜಾತ್ರೆಗಳನ್ನು ದುರುಪಯೋಗ ಮಾಡುವುದನ್ನು ನಾವು ಖಂಡಿಸುತ್ತೇವೆ. ಇವರಿಗೆ ಧಮ್ಮು ಇದ್ದರೆ, ತಾಕತ್ತು ಇದ್ದರೆ, ಧರ್ಮಸ್ಥಳದ ಜಾತ್ರೆಯಲ್ಲಿ ಮುಸ್ಲಿಂರನ್ನು ನಿಷೇಧ ಮಾಡಲಿ. ಹಿಂದೂ ಜ್ಯೋತಿಷಿಗಳ ಬಳಿ ಮುಸ್ಲಿಂರು ಬಾರದಂತೆ ತಡೆಯಲಿ. ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ ಕ್ಷೇತ್ರದಲ್ಲಿ ಮುಸ್ಲಿಂ ಪ್ರವಾಸಿಗರನ್ನು ನಿಷೇಧಿಸಲಿ” ಎಂದಿದೆ.