- ಡಿಕೆಶಿ ಕುರಿತು ವಿವಾದಿತ ಹೇಳಿಕೆ ನೀಡಿ ಟಿಕೆಟ್ ವಂಚಿತರಾಗಿದ್ದ ದತ್ತ
- ಪಕ್ಷ ಸೇರಿ ಮೂರು ತಿಂಗಳು ಕಳೆಯುವ ಮುನ್ನವೇ ಕಾಂಗ್ರೆಸ್‌ಗೆ ಗುಡ್ ಬೈ
ಒಂದು ಕಾಲದ ಜೆಡಿಎಸ್ ಮೇಷ್ಟ್ರು, ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರ ಅಂತಲೇ ಹೆಸರಾಗಿದ್ದ ವೈ ಎಸ್ ವಿ ದತ್ತ ಮತ್ತೆ ಜೆಡಿಎಸ್‌ಗೆ ಮರಳಿದ್ದಾರೆ.
ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿ ಜೆಡಿಎಸ್ ತೊರೆದಿದ್ದರು. ಜನವರಿ 15ರಂದು ಕಾಂಗ್ರೆಸ್ ಸೇರಿದ್ದ ದತ್ತ ಈಗ ಮೂರು ತಿಂಗಳು ಕಳೆಯುವ ಮುನ್ನವೇ ಕಾಂಗ್ರೆಸ್ಸಿಗೂ ಗುಡ್ ಬೈ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕುರಿತು ದತ್ತ ಅವರು ವಿವಾದಿತ ಹೇಳಿಕೆ ನೀಡಿದ್ದೆ ಟಿಕೆಟ್ ತಪ್ಪಲು ಕಾರಣವಾಗಿದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿಬಂದಿವೆ. ಕಡೂರು ಕ್ಷೇತ್ರಕ್ಕೆ ಕೆ ಎಸ್ ಆನಂದ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಇದರಿಂದ ಮುನಿಸಿಕೊಂಡ ದತ್ತ ತನ್ನ ಬೆಂಬಲಿಗರೊಂದಿಗೆ ಸಭೆ ಕರೆದು ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚಿಸಿದ್ದರು.
ಈ ಸುದ್ದಿ ಓದಿದ್ದೀರಾ? ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಉಮೇದುವಾರಿಕೆ ಸಲ್ಲಿಸಿ ಗಮನ ಸೆಳೆದ ಅಭ್ಯರ್ಥಿಗಳು
ಆ ಸಭೆ, ಚರ್ಚೆಯ ನಂತರ ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ದತ್ತ ಅವರು, “ಕಾಂಗ್ರೆಸ್‌ನಲ್ಲಿ ಅನ್ಯಾಯ ಆಗೋಯ್ತು” ಅಂತ ಅಳಲು ತೋಡಿಕೊಂಡು, ಪಕ್ಷಕ್ಕೆ ವಾಪಾಸ್ ಆಗುವ ಅಭಿಲಾಷೆ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.
ದೇವೇಗೌಡರೊಂದಿಗಿನ ಮಾತುಕತೆ ಬಳಿಕ ಎಚ್ ಡಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ಅವರು ಗುರುವಾರ ವೈ ಎಸ್ ವಿ ದತ್ತ ಅವರ ಮನೆಗೆ ಭೇಟಿ ನೀಡಿ, ಅಧಿಕೃತವಾಗಿ ಅವರನ್ನು ಮರಳಿ ಜೆಡಿಎಸ್‌ಗೆ ಬರಮಾಡಿಕೊಂಡಿದ್ದಾರೆ.