- ರಾಷ್ಟ್ರೀಯ ಪಕ್ಷಗಳನ್ನೂ ಕಾಡುತ್ತಿರುವ ಠೇವಣಿ ನಷ್ಠದ ಭೀತಿ
- ಠೇವಣಿ ಕಳೆದುಕೊಳ್ಳುವುದರಲ್ಲಿ ಬಿಜೆಪಿ, ಜೆಡಿಎಸ್‌ನದ್ದೇ ಮೇಲುಗೈ
ಚುನಾವಣೆ ಎಂದಾಕ್ಷಣಕ್ಕೆ ಸೋಲು-ಗೆಲುವು ಸಾಮಾನ್ಯ. ಹೀಗಿರುವಾಗ ಚುನಾವಣೆಯಲ್ಲಿ ಸ್ಪರ್ಧಿಸುವ ಅದೆಷ್ಟೋ ಅಭ್ಯರ್ಥಿಗಳು ಸೋಲು ಗೆಲುವಿನ ಅಕ್ಕಪಕ್ಕಕ್ಕೂ ಸುಳಿಯದೇ ತಾವೇನು ಪಡೆದುಕೊಂಡಿದ್ದೇವೆ ಎನ್ನುವುದನ್ನೂ ಅರಿಯದೆ ಹಾಗೆ ಮರೆಗೆ ಸರಿದು ಬಿಡುತ್ತಾರೆ.
ಇದನ್ನು ರಾಜಕೀಯ ಭಾಷೆಯಲ್ಲಿ ಠೇವಣಿ ಕಳೆದುಕೊಳ್ಳುವುದು ಎನ್ನಲಾಗುತ್ತದೆ. ಈ ವಿಚಾರದಲ್ಲೂ ರಾಷ್ಟ್ರೀಯ ಪಕ್ಷ ಬಿಜೆಪಿ ತನ್ನ ಹೆಸರಲ್ಲೊಂದು ದಾಖಲೆ ಮಾಡಿಕೊಂಡಿದೆ.
ಬಿಜೆಪಿಯಿಂದ ಸ್ಪರ್ಧಿಸಿದ ಅಭ್ಯರ್ಥಿಗಳ ಎರಡು ದಶಕಗಳ ಚುನಾವಣೆ ಇತಿಹಾಸವನ್ನೊಮ್ಮೆ ನೋಡಿದರೆ ಅತಿ ಹೆಚ್ಚು ಠೇವಣಿ ಕಳೆದುಕೊಂಡಿರುವ ಅಭ್ಯರ್ಥಿಗಳು ಬಿಜೆಪಿಗರೇ ಆಗಿದ್ದಾರೆ.
ಇಂತಹದ್ದೊಂದು ಅಂಕಿ ಅಂಶವನ್ನು ಚುನಾವಣಾ ಆಯೋಗ ಮಾಹಿತಿ ಪುಟಗಳಲ್ಲಿ ದಾಖಲಿಸಿದೆ.
2004ರಿಂದ ಈವರೆಗಿನ ಚುನಾವಣೆಗಳ ಅಂಕಿ ಅಂಶಗಳ ಪ್ರಕಾರ ಇಲ್ಲಿಯವರೆಗೆ ಹಲವು ಬಾರಿ ಸರ್ಕಾರ ರಚಿಸಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳೇ ಅತಿ ಹೆಚ್ಚು ಠೇವಣಿ ಕಳೆದುಕೊಂಡಿರುವುದು ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಹೋಲಿಸಿದರೆ, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಡಿಪಾಸಿಟ್ ಕಳೆದುಕೊಳ್ಳುವ ಪ್ರಮಾಣ ಹೆಚ್ಚಾಗಿದೆ.
2004ರಿಂದ ಇಲ್ಲಿಯವರೆಗಿನ ಚುನಾವಣೆಗಳಲ್ಲಿ ಬಿಜೆಪಿಯ ಒಟ್ಟು 868 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಪೈಕಿ ಬಿಜೆಪಿಯ 219 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದ 861 ಉಮೇದುವಾರರ ಪೈಕಿ 428 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಹಾಗೆಯೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ 891 ಅಭ್ಯರ್ಥಿಗಳ ಪೈಕಿ 54 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆ ಮುಗಿಯಲು ಬಾಕಿ ಇರುವುದು ಇನ್ನು ಕೇವಲ ಹದಿಮೂರು ದಿನಗಳಷ್ಟೇ. ಈ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚು ಮಾಡಲು ಚುನಾವಣೆ ಆಯೋಗ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ವಿಶೇಷ ಚೇತನರಿಗೆ, ವಯಸ್ಸಾದ ಮತದಾರರಿಗೆ, ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. ಈ ಹೊಸ ಪ್ರಯೋಗದ ನಂತರವೂ ಎಷ್ಟು ಅಭ್ಯರ್ಥಿ ಠೇವಣಿ ಕಳೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು.