- 20ಕ್ಕೂ ಹೆಚ್ಚು ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿ
- ಬಸವ ಜಯಂತಿಯಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ
ಬಸವಣ್ಣ ಅವರು ತಮ್ಮ ಜೀವನಪೂರ್ತಿ ಹೋರಾಟ ನಡೆಸಿದ್ದರು. ಹಾಗಾಗಿ ಅವರು ನಮಗೆ ಸದಾ ಆದರ್ಶ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಬಸವ ಧರ್ಮ ಪೀಠ ಆಯೋಜಿಸಿರುವ ಬಸವ ಜಯಂತಿಯಲ್ಲಿ ರಾಹುಲ್ ಗಾಂಧಿ ಅವರು ಭಾಷಣ ಮಾಡಿದ್ದಾರೆ.
ನನ್ನನ್ನು ಬಸವ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಖುಷಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಇದಕ್ಕೂ ಮೊದಲು ಹಿಂದಿಯಲ್ಲೂ ಭಾಷಣ ಮಾಡಿದ ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಅವರಿಗೆ ಧನ್ಯವಾದ ತಿಳಿಸಿದರು.
“ಬಸವಣ್ಣ ಪ್ರಜಾಪ್ರಭುತ್ವದ ರಕ್ಷಣೆ ಮಾಡಿದ್ದಾರೆ. ಇದು ಸತ್ಯ, ಆದ್ದರಿಂದ ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಭಾರತ ಈಗ ಗಣತಂತ್ರ ದೇಶ. ಆದರೆ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪ ಕಟ್ಟಿದ್ದರು” ಎಂದು ರಾಹುಲ್ ಗಾಂಧಿ ಹೇಳಿದರು.
“ಸಮಾಜದಲ್ಲಿ ಕತ್ತಲು ಕವೆದ ಸಂದರ್ಭದಲ್ಲಿ ಬಸವಣ್ಣ ಬೆಳಕು ತಂದರು. ಮೊದಲು ತಮ್ಮನ್ನು ತಾವು ಪರಾಮರ್ಶಿಸಿಕೊಂಡರು. ಇತರರನ್ನು ವಿಮರ್ಶಿಸುವುದು ಸುಲಭ ಆದರೆ, ಸ್ವಯಂ ಪರಾಮರ್ಶೆಗೆ ಒಳಪಡಿಸಿಕೊಳ್ಳುವುದು ಕಷ್ಟ” ಎಂದರು.
“ಬಸವಣ್ಣ ತಮ್ಮ ಎಂಟನೇ ವಯಸ್ಸಿಗೆ ಜನಿವಾರ ಹಾಕಿಕೊಳ್ಳುವುದನ್ನು ತೊರೆದಿದ್ದರು. ಅವರ ಸ್ನೇಹಿತರ ಮೇಲೆ ಸಮಾಜ ದಾಳಿ ಮಾಡುತ್ತಿತ್ತು. ಬಸವಣ್ಣನವರ ಸ್ನೇಹಿತರ ಪರಿಸ್ಥಿತಿ ಹೀನಾಯವಾಗಿತ್ತು. ಇದನ್ನೆಲ್ಲಾ ಕಂಡ ಅವರು ಪ್ರತಿಭಟಿಸಿದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಎಐಸಿಸಿ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ್ ಬಂಧಿಸಲು ರಾಜ್ಯಕ್ಕೆ ಬಂದ ಅಸ್ಸಾಂ ಪೊಲೀಸರು
“ಜೀವನಪೂರ್ತಿ ಬಸವಣ್ಣನವರು ಸ್ವಯಂ ಪ್ರಶ್ನೆ ಹಾಕಿಕೊಂಡರು, ಸಮಾಜದ ತಾರತಮ್ಯಗಳ ಬಗ್ಗೆ ಪ್ರಶ್ನೆ ಎತ್ತಿದರು. ಜಾತಿವಾದ, ದ್ವೇಷ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನಿಸಿಕೊಂಡರು. ಅಲ್ಲಿಂದ ಸಮಾಜದ ಬದಲಾವಣೆಗೆ ಮುಂದಾದರು” ಎಂದರು.
“ಸಮಾಜದಲ್ಲಿ ಪ್ರಶ್ನೆ ಮಾಡುವುದಕ್ಕೆ ದೈರ್ಯ ಬೇಕು. ಬಸವಣ್ಣನವರು ಭಯ ಪಡಬೇಡಿ ಎಂದಿದ್ದರು. ಸಮಾಜದಲ್ಲಿ ಸತ್ಯ ಹೇಳುವುದು ಕಷ್ಟ. ಬಸವಣ್ಣ ಇದನ್ನು ಅನುಸರಿಸಿದರು” ಎಂದು ಹೇಳಿದರು.
“ಬಸವಣ್ಣನ ವಿರೋಧಿಗಳು ಅವರಿಗೆ ಬೆದರಿಕೆ ಹಾಕಿದ್ದರು. ಜೀವ ಬೆದರಿಕೆ ಒಡ್ಡಿದ್ದರು. ಆದರೆ, ಅವರು ಹಿಂದೆ ಸರಿಯಲಿಲ್ಲ. ಸತ್ಯದ ಮಾರ್ಗದಲ್ಲಿ ಮುಂದುವರಿದರು. ಬಸವಣ್ಣ ಹೆದರಬೇಡಿ ಎಂದರು. ಸತ್ಯದ ಮಾರ್ಗದಲ್ಲಿ ನಡೆಯಿರಿ, ಎಲ್ಲರನ್ನೂ ಗೌರವಿಸಿ ಎನ್ನುವ ಸಂದೇಶ ನೀಡಿದ್ದಾರೆ. ಆದರೆ, ಇಲ್ಯಾರು ಅದನ್ನು ಅನುಸರಿಸುತ್ತಿಲ್ಲ” ಎಂದು ಖೇದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ 20ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಎಂ ಬಿ ಪಾಟೀಲ್ ಅವರು ಉಪಸ್ಥಿತರಿದ್ದರು.