- ಸಿದ್ದರಾಮಯ್ಯ ತವರು ವರುಣಾದಲ್ಲಿ ಅಮಿತ್ ಶಾ ಮತ ಬೇಟೆ
- ಸೋಮಣ್ಣ ಗೆಲ್ಲಿಸಿ, ಸಿದ್ದರಾಮಯ್ಯ ಸೋಲಿಸಲು ಕರೆ ನೀಡಿದ ಶಾ
ಲಿಂಗಾಯತ ಸಮುದಾಯವನ್ನು ಅಪಮಾನಿಸಿದ ಸಿದ್ದರಾಮಯ್ಯರನ್ನು ಗೆಲ್ಲಿಸಬೇಡಿ, ನಿವೃತ್ತಿ ಹೊಂದುವ ನಾಯಕನ ಬದಲು ವರುಣಾ ಕ್ಷೇತ್ರ ಬೆಳೆಸಲು ಬಂದಿರುವ ಸೋಮಣ್ಣ ಅವರನ್ನು ಗೆಲ್ಲಿಸಿ ಕಳುಹಿಸಿ ಎಂದು ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಮನವಿ ಮಾಡಿದರು.
ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಮತಯಾಚಿಸಿದ ಅಮಿತ್ ಶಾ, ಸಿಕ್ಕ ಅವಕಾಶದಲ್ಲಿ ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ಧರಾಮಯ್ಯಗೆ ಸೋಲಿನ ಭಯ ಶುರುವಾಗಿದೆ. ಅವರು ಅಭಿವೃದ್ದಿ ಮಾಡದೆ ಓಡಿ ಹೋಗುತ್ತಾರೆ. ಪದೆ ಪದೇ ಕ್ಷೇತ್ರ ಬದಲಿಸುವ ಸಿದ್ದರಾಮಯ್ಯ ಬದಲು ವಿ.ಸೋಮಣ್ಣರಿಗೆ ಹೆಚ್ಚು ಮತ ನೀಡಿ ಗೆಲ್ಲಿಸಿ ಎಂದು ಅಮಿತ್ ಶಾ ಕರೆ ನೀಡಿದರು.
ಕರ್ನಾಟಕವನ್ನು ಅಭಿವೃದ್ದಿ ಮತ್ತು ಸುರಕ್ಷಿತ ರಾಜ್ಯ ಮಾಡುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ. ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದರೆ ಪಿಎಫ್ ಐ ನಿಷೇಧವನ್ನು ಹಿಂಪಡೆಯುತ್ತಾರೆ. ಕಾಂಗ್ರೆಸ್ ರಾಜ್ಯವನ್ನು ಎಟಿಎಂ ಮಾಡಲು ಹೊರಟಿದೆ ಎಂದರು.
ಸಿದ್ದರಾಮಯ್ಯ ಅವರು ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ. ಆದರೆ ಬಿಜೆಪಿ ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿದೆ. ಸಿದ್ದರಾಮಯ್ಯ ಅವರು ಲಿಂಗಾಯತರು ಭ್ರಷ್ಟಾಚಾರಿಗಳು ಎನ್ನುವ ಮೂಲಕ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ಈ ಸುದ್ದಿ ಓದಿದ್ದೀರಾ?:ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಜನ, ಪ್ರಣಾಳಿಕೆ ಭರವಸೆ ಈಡೇರಿಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ ಅಮಿತ್ ಶಾ, ಸಿದ್ದರಾಮಯ್ಯ ಅವರೆ ನೀವು ಯಾಕೆ ಪದೆ ಪದೇ ಕ್ಷೇತ್ರ ಬದಲಾಯಿಸುತ್ತೀರಿ ಅನ್ನೋದನ್ನು ಮೊದಲು ಹೇಳಿ. ವರುಣಾ ಮತದಾರರೇ ನಿವೃತ್ತಿ ಹೊಂದುವ ನಾಯಕ ಬೇಕಾ ಅಥವಾ ಭವಿಷ್ಯದ ಬಗ್ಗೆ ಯೋಜಿಸುವ ನಾಯಕ ಬೇಕಾ ಎನ್ನುವುದನ್ನೂ ನೀವು ಯೋಚಿಸಿ ಎಂದ ಅವರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿ ಎಂದರು.
ನೀವು ಸೋಮಣ್ಣ ಅವರನ್ನು ಗೆಲ್ಲಿಸಿ ಕಳುಹಿಸಿದರೆ ನಾವು ಈ ಕ್ಷೇತ್ರವನ್ನು ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ. ಹೀಗಾಗಿ ಸೋಮಣ್ಣ ಅವರನ್ನ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಶಾಸಕರಾಗಿ ಆಯ್ಕೆ ಮಾಡಬೇಕು ಎಂದು ಶಾ ಕೇಳಿಕೊಂಡರು.