‘ಕಾಂಗ್ರೆಸ್ ಪಕ್ಷಕ್ಕೆ ಏನು ಮಾಡಬೇಕೋ ಎಲ್ಲವನ್ನೂ ಮಾಡಿರುವೆ. ಕಷ್ಟ ಕಾಲದಲ್ಲಿ ಶ್ರಮ ಹಾಕಿ ದುಡಿದಿದ್ದೇನೆ. ಈಗ ಬೇರೆ ಯಾವ ಸಂದರ್ಭವೂ ಉದಯಿಸುವುದಿಲ್ಲ. ಎಲ್ಲರೂ ನನಗೆ ಸಹಕಾರ ಕೊಟ್ಟು, ಆಶೀರ್ವಾದ ಮಾಡುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಸಂಕಷ್ಟದ ಸಮಯದಲ್ಲಿ ಪಕ್ಷ ಮುನ್ನಡೆಸಿದ್ದೇನೆ.ಕೆಪಿಸಿಸಿ ಅಧ್ಯಕ್ಷ ಆದಾಗಿನಿಂದ ನಿದ್ದೆ ಇಲ್ಲದೇ ಪಕ್ಷ ಬಲಪಡಿಸಿದ್ದೇನೆ” ಎಂದರು.
“ದಿನೇಶ್ ಗುಂಡೂರಾವ್ ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದಾಗ ಸೋನಿಯಾ ಗಾಂಧಿ ಅವರು ನನಗೆ ಅಧಿಕಾರ ವಹಿಸಿದರು. ಉಪ ಚುನಾವಣೆ ಫಲಿತಾಂಶ ಬಳಿಕ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಮುಂದೆ ಬಂದರು.ಈಗ ಹಿರಿಯರು ಮತ್ತು ಕಿರಿಯರು ನನಗೆ ಸಹಕಾರ ಕೊಡುತ್ತಾರೆ” ಎಂದು ಭರವಸೆ ವ್ಯಕ್ತಪಡಿಸಿದರು.
“ಸದ್ಯ ಯಾವುದೇ ರೀತಿಯ ಅಧಿಕಾರ ಹಂಚಿಕೆ ಚರ್ಚೆ ನಡೆದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನು ತೀರ್ಮಾನ ಮಾಡುತ್ತಾರೋ ಅದೇ ಅಂತಿಮ” ಎಂದು ಅವರು ತಿಳಿಸಿದರು.