- ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ.8.73
- ಒಟ್ಟು 5,102 ನಾಮಪತ್ರಗಳು ಸಲ್ಲಿಕೆಯಾಗಿವೆ
ರಾಜ್ಯ ವಿಧಾನಸಭೆಯ ಕೊನೆಯ ದಿನವಾದ ಗುರುವಾರ (ಏಪ್ರಿಲ್ 20) ಒಟ್ಟು 1,691 ಅಭ್ಯರ್ಥಿಗಳು 1,934 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಮೇ 10ರಂದು ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಏ.20 ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದ್ದರಿಂದ ಒಂದೇ ದಿನ 1,934 ನಾಮಪತ್ರಗಳು ಸಲ್ಲಿಕೆಯಾಗಿವೆ.
ಈ ಪೈಕಿ 1,544 ಪುರುಷರು, 146 ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ಏ.21ರಂದು ನಡೆಯಲಿದೆ. ಹಾಗೆಯೇ ನಾಮಪತ್ರ ಹಿಂಪಡೆಯಲು ಏ.24ರ ಸೋಮವಾರ ಕೊನೆಯ ದಿನವಾಗಿದೆ.
ಒಟ್ಟಾರೆ 224 ವಿಧಾನಸಭಾ ಕ್ಷೇತ್ರಗಳಿಗೆ ಏ.13ರಿಂದ ಏ.20ರವರೆಗೆ ಒಟ್ಟಾರೆ 3,632 ಅಭ್ಯರ್ಥಿಗಳಿಂದ 5,102 ನಾಮಪತ್ರಗಳು ಸಲ್ಲಿಕೆಯಾಗಿವೆ. 3,632 ಅಭ್ಯರ್ಥಿಗಳ ಪೈಕಿ 3,327 ಪುರುಷ ಅಭ್ಯರ್ಥಿಗಳು ಹಾಗೂ 304 ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಒಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಮೌಢ್ಯಕ್ಕೆ ಸೆಡ್ಡು; ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ
ಪಕ್ಷಗಳಿಂದ ಎಷ್ಟೆಷ್ಟು ನಾಮಪತ್ರ ಸಲ್ಲಿಕೆಯಾಗಿದೆ?
ಬಿಜೆಪಿಯಿಂದ 707 ನಾಮಪತ್ರಗಳು ಸಲ್ಲಿಕೆಯಾಗಿದ್ದರೆ, ಕಾಂಗ್ರೆಸ್‌ನಿಂದ 651, ಜೆಡಿಎಸ್‌ನಿಂದ 455, ಆಮ್ ಆದ್ಮಿ ಪಕ್ಷದಿಂದ 373, ಬಿಎಸ್‌ಪಿಯಿಂದ 179, ಸಿಪಿಐಎಎಮ್‌ನಿಂದ 5, ಎನ್‌ಪಿಪಿಯಿಂದ 5 ನಾಮಪತ್ರಗಳು ಸಲ್ಲಿಕೆಯಾಗಿದೆ.
ಇನ್ನು ಮಾನ್ಯತೆ ಪಡೆಯದ ನೋಂದಾಯಿತ ಪಕ್ಷಗಳಿಂದ 1,007 ನಾಮಪತ್ರಗಳು ಹಾಗೂ 1,720 ಸ್ವತಂತ್ರ ಅಭ್ಯರ್ಥಿಗಳು ನಾಮಿನೇಷನ್ ಸಲ್ಲಿಸಿದ್ದಾರೆ.
ಮಹಿಳಾ ಪ್ರಮಾಣ ಶೇ.8ರಷ್ಟು ಮಾತ್ರ
ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯ ಪರವಾಗಿ ಮಾತನಾಡುತ್ತವೆ. ಆದರೆ, ಸಲ್ಲಿಕೆಯಾದ ನಾಮಪತ್ರಗಳ ಪೈಕಿ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಕೇವಲ ಶೇ.8.73ರಷ್ಟು ಮಾತ್ರವಿದೆ. ಪುರುಷ ಅಭ್ಯರ್ಥಿಗಳ ಪ್ರಮಾಣ ಶೇ.91.60ರಷ್ಟಿದೆ. ಇಲ್ಲಿಗೆ ಪಕ್ಷಗಳ ಮಹಿಳೆಯರಿಗೆ ರಾಜಕೀಯ ವಲಯದಲ್ಲಿ ನೀಡಿರುವ ಮಹಿಳಾ ಪ್ರತಿನಿಧಿಕರಣ ಕಾಣಿಸುತ್ತದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದೆ. ಮೂರು ದಿನಗಳ ಬಳಿಕ ಎಂದರೆ, 13ನೇ ತಾರೀಖಿಗೆ ಫಲಿತಾಂಶ ಹೊರಬೀಳಲಿದೆ.