ವಿಧಾನಸಭಾ ಚುನಾವಣಗೆ ಇನ್ನು ಮೂರು ವಾರಗಳಷ್ಟೇ ಬಾಕಿ ಇವೆ. ಈ ನಡುವೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಎದುರಿಸುತ್ತಿರುವ ‘40% ಕಮಿಷನ್’ ಆರೋಪವನ್ನು ಮುನ್ನೆಲೆಯಲ್ಲಿಟ್ಟುಕೊಂಡು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ಅದಕ್ಕಾಗಿ, ವಿಡಿಯೋ ಒಂದನ್ನು ಸೋಮವಾರ ಕಾಂಗ್ರೆಸ್ ಬಿಡುಗಡೆ ಮಾಡಿದೆ.
2021ರ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ಗುತ್ತಿಗೆದಾರರ ಸಂಘ ಪತ್ರ ಬರೆದು, 40% ಕಮಿಷನ್ ಬಗ್ಗೆ ಆರೋಪ ಮಾಡಿತ್ತು. ಇದೇ ಸಮಯದಲ್ಲಿ, ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣ, ಶಿಕ್ಷಕರ ನೇಮಕಾತಿ ಹಗರಣ, ಮೊಟ್ಟೆ ಹಗರಣ, ಕೋವಿಡ್ ಉಪಕರಣ ಖರೀದಿ ಹಗರಣ, ಬಿಬಿಎಂಪಿ ಟೆಂಡರ್ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್‌ನಲ್ಲಾದ ಅವ್ಯವಹಾರ ಸೇರಿದಂತೆ ಬಿಜೆಪಿ ಎದುರಿಸುತ್ತಿರುವ ವಿವಿಧ ಹಗರಣಗಳ ಆರೋಪಗಳನ್ನು ಕಾಂಗ್ರೆಸ್ ವೀಡಿಯೊದಲ್ಲಿ ಉಲ್ಲೇಖಿಸಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ, ಕಮಿಷನ್ ಮತ್ತು ಕೋಮುವಾದಕ್ಕೆ ಸ್ಥಾನವಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. 40% ಕಮಿಷನ್ ಪಡೆಯುವ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು, ಜನರನ್ನು ಪ್ರತಿನಿಧಿಸುವ ಸರ್ಕಾರವನ್ನು ಅಧಿಕಾರಕ್ಕೆ ತರಲು ಇದು ಸಕಾಲವೆಂದು ಕಾಂಗ್ರೆಸ್ ಒತ್ತಿ ಹೇಳುತ್ತಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ಅನ್ನು ಜನರು ಬೆಂಬಲಿಸಬೇಕು. ಪಕ್ಷವು ಕನಿಷ್ಠ 150 ಸ್ಥಾನಗಳನ್ನು ಗೆದ್ದು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಂತೆ ಮಾಡಬೇಕೆಂದು ಜನತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ. “ಅವರು (ಬಿಜೆಪಿ ಸರ್ಕಾರ) 40% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ, ಅವರಿಗೆ ಕೇವಲ 40 ಸೀಟುಗಳನ್ನು ಈ ಬಾರಿ ನೀಡಬೇಕು,” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ನಾಲ್ಕು ಚುನಾವಣಾ ‘ಖಾತರಿ’ಗಳನ್ನು ಘೋಷಿಸಿದೆ – ಎಲ್ಲ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ (ಗೃಹ ಜ್ಯೋತಿ), ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 2,000 ರೂ (ಗೃಹ ಲಕ್ಷ್ಮಿ), ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತ (ಅನ್ನ ಭಾಗ್ಯ), ಮತ್ತು ಪದವೀಧರ ಯುವಕರಿಗೆ ಪ್ರತಿ ತಿಂಗಳು ರೂ 3,000 ನಿರುದ್ಯೋಗ ಭತ್ಯೆ (ಯುವನಿಧಿ) ನೀಡುವ ಭರವಸೆ ನೀಡಿದೆ.
ಈ ಸುದ್ದಿ ಓದಿದ್ದೀರಾ?: ಕಾರವಾರ | ಬಿಜೆಪಿ ನಾಯಕರು ನನ್ನಿಂದ ಹಣ ಪಡೆದು ಟಿಕೆಟ್ ತಪ್ಪಿಸಿದ್ದಾರೆ : ಗಂಗಾಧರ ಭಟ್ ಕಣಕ್ಕೆ