ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆಯೆಂಬುದರ ಕುರಿತು ಅಂಕಿ-ಅಂಶಗಳನ್ನು ಹಿಂದಿನ ಭಾಗದಲ್ಲಿ ನೋಡಿದ್ದೀರಿ. ಅದಕ್ಕೆ ಕಾರಣಗಳನ್ನು ಮತದಾರರಿಗೆ ಕೇಳಿದ ಉಳಿದ ಪ್ರಶ್ನೆಗಳಿಂದ ಅರಿಯಲು ಈ ಭಾಗದಲ್ಲಿ ಪ್ರಯತ್ನಿಸಲಾಗಿದೆ. ಈ ಪ್ರಶ್ನೆಗಳಿಗೆ ಬಂದಿರುವ ಉತ್ತರಗಳಿಂದ ಸ್ಪಷ್ಟವಾದ ಸಂಗತಿಯೆಂದರೆ – ಬಸವರಾಜ ಬೊಮ್ಮಾಯಿ ಸರ್ಕಾರವು ಭ್ರಷ್ಟ ಸರ್ಕಾರವೆಂಬ ಇಮೇಜನ್ನು ಪಡೆದುಕೊಂಡಿದೆ. ಕಳೆದ ನಾಲ್ಕು ಸರ್ಕಾರಗಳಲ್ಲಿ ಬೊಮ್ಮಾಯಿ ಸರ್ಕಾರವೇ ಅತ್ಯಂತ ಹೆಚ್ಚು ಭ್ರಷ್ಟ ಸರ್ಕಾರವೆಂದು ಮತದಾರರು ಹೇಳುತ್ತಿದ್ದಾರೆ.
ಮೊದಲಿಗೆ ಈ ಸಮೀಕ್ಷೆ ಏನೆಂದು ಅರಿಯಲು ಈ ವರದಿ ಓದಿ: ಚುನಾವಣೆ 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಅತಿ ದೊಡ್ಡ ಸಮೀಕ್ಷೆ ‘ಈ ದಿನ.ಕಾಮ್’ನ ಸಮೀಕ್ಷೆ
ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ಮತದಾರರನ್ನು ʼನಿಮ್ಮ ಅಭಿಪ್ರಾಯದಲ್ಲಿ, ಇತ್ತೀಚಿನ ಸರ್ಕಾರಗಳ ಪೈಕಿ ಅತ್ಯಂತ ಭ್ರಷ್ಟ ಸರ್ಕಾರ ಯಾವುದು?ʼ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅವರಿಗೆ ಕಳೆದ ಒಂದು ದಶಕದಲ್ಲಿ ಆಡಳಿತ ನಡೆಸಿದ ನಾಲ್ಕು ಸರ್ಕಾರಗಳ ಆಯ್ಕೆಗಳನ್ನು ನೀಡಲಾಗಿತ್ತು: ಇಬ್ಬರು ಮುಖ್ಯಮಂತ್ರಿಗಳ ನೇತೃತ್ವದ ಬಿಜೆಪಿ ಸರ್ಕಾರಗಳು ಮತ್ತು ಅದರ ಹಿಂದೆ ಆಡಳಿತ ನಡೆಸಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖ್ಯಮಂತ್ರಿಗಳ ನೇತೃತ್ವದ ಸರ್ಕಾರಗಳು ಆಯ್ಕೆಯಲ್ಲಿದ್ದವು. ಈ ಪ್ರಶ್ನೆಗೆ ಉತ್ತರಿಸಿದವರಲ್ಲಿ ಶೇ.36ರಷ್ಟು ಮತದಾರರು ಬೊಮ್ಮಾಯಿ ನೇತೃತ್ವದ ಸರ್ಕಾರವೇ ಕಳೆದ ನಾಲ್ಕು ಸರ್ಕಾರಗಳ ಪೈಕಿ ಅತ್ಯಂತ ಹೆಚ್ಚು ಭ್ರಷ್ಟ ಸರ್ಕಾರ ಎಂದು ಉತ್ತರಿಸಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರವೇ ಭ್ರಷ್ಟ ಸರ್ಕಾರವಾಗಿತ್ತೆಂದು ಶೇ.14ರಷ್ಟು ಮತದಾರರು ಹೇಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಅತ್ಯಂತ ಭ್ರಷ್ಟವಾಗಿತ್ತೆಂದು ಶೇ.13ರಷ್ಟು ಜನರೂ, ಕುಮಾರಸ್ವಾಮಿ ನೇತೃತ್ವದ ಸರ್ಕಾರವೇ ಅತ್ಯಂತ ಭ್ರಷ್ಟವಾಗಿತ್ತೆಂದು ಶೇ.8ರಷ್ಟು ಜನರೂ ಉತ್ತರಿಸಿದ್ದಾರೆ.
ಈ ಸಮೀಕ್ಷಾ ವರದಿ ಓದಿದ್ದೀರಾ? ಈದಿನ.ಕಾಮ್ ಸಮೀಕ್ಷೆ 2: ಕರ್ನಾಟಕದಲ್ಲಿ ಸ್ಪಷ್ಟ ಆಡಳಿತ ವಿರೋಧಿ ಅಲೆ ಇದೆ
ಉಳಿದ ಶೇ.29ರಷ್ಟು ಜನರು ಎಲ್ಲರೂ ಭ್ರಷ್ಟರೆಂದೋ ಅಥವಾ ಯಾರೂ ಭ್ರಷ್ಟರಲ್ಲ ಎಂದೋ ಹೇಳಿದ್ದಾರೆ. ಅಂದರೆ, ಪ್ರತಿಕ್ರಿಯಿಸಿದವರಲ್ಲಿ ಅರ್ಧದಷ್ಟು ಜನರು ಬಿಜೆಪಿ ನೇತೃತ್ವದ ಸರ್ಕಾರಗಳನ್ನು ಹೆಸರಿಸಿದ್ದಾರೆ. ಅಂತಿಮವಾಗಿ ಬಿಜೆಪಿಗೆ ಮತ ಹಾಕುತ್ತೇವೆಂದು ಹೇಳಿದವರಲ್ಲೂ ಶೇ.20ರಷ್ಟು ಜನ ಈ ಸರ್ಕಾರ ಎಲ್ಲಕ್ಕಿಂತ ಹೆಚ್ಚು ಭ್ರಷ್ಟ ಸರ್ಕಾರವಾಗಿತ್ತು ಎಂದು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ, 40% ಕಮಿಷನ್, ಪೇ ಸಿಎಂ ಪ್ರಚಾರಗಳೆಲ್ಲವೂ ನಡೆದಿದ್ದರಿಂದ ವಿಶೇಷವಾಗಿ ಈ ಪ್ರಶ್ನೆಯನ್ನು ಹಾಕಲಾಗಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಆಡಳಿತ ಮಾಡಿದ ಎಲ್ಲಾ ಸರ್ಕಾರಗಳಿಗೂ ಈ ಪ್ರಶ್ನೆಯನ್ನು ವಿಸ್ತರಿಸಲಾಗಿತ್ತು.
ಬೊಮ್ಮಾಯಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ
ಬೊಮ್ಮಾಯಿಯವರು ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸುತ್ತಿದ್ದು, ಅದಕ್ಕೆ ಮುಂಚೆ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿತ್ತು. ಅದಕ್ಕೂ ಮುಂಚೆ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿತ್ತು. ಆ ಸರ್ಕಾರ ರಚನೆಯಾಗುವ ಮುಂಚೆ ಪೂರ್ಣಾವಧಿ ಆಡಳಿತವನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆಸಿತ್ತು. 2006ರ ನಂತರ ರಾಜ್ಯದಲ್ಲಿ ಅಧಿಕಾರ ನಡೆಸಿದವರು ಈ ನಾಲ್ವರು ಮುಖ್ಯಮಂತ್ರಿಗಳಾಗಿದ್ದು, ಅದಕ್ಕಿಂತ ಮುಂಚಿನ ಮುಖ್ಯಮಂತ್ರಿಗಳ ಆಡಳಿತ ವೈಖರಿಯ ಕುರಿತೂ ಆ ವಯೋಮಾನದವರು ಅನಿಸಿಕೆಯನ್ನು ಹೊಂದಿರುವ ಸಾಧ್ಯತೆ ಇದೆ.
ಹೀಗಾಗಿ ಮುಖ್ಯಮಂತ್ರಿಗಳ ಕಾರ್ಯವೈಖರಿಯ ಕುರಿತಂತೆ ಪ್ರಶ್ನೆಯನ್ನು ಕೇಳಲಾಗಿತ್ತು. ನಿಮ್ಮ ಪ್ರಕಾರ ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಯಾರು? ಎಂಬುದು ಪ್ರಶ್ನೆಯಾಗಿತ್ತು. ಆದರೆ, ಈ ಪ್ರಶ್ನೆಗೆ ಯಾವುದೇ ಆಯ್ಕೆಗಳನ್ನು ನೀಡಲಾಗಿರಲಿಲ್ಲ; ಮತದಾರರೇ ತಮ್ಮ ಅನಿಸಿಕೆಯನ್ನು ಹೇಳಲು ಅವಕಾಶ ಕಲ್ಪಿಸಲಾಗಿತ್ತು. ಸುಮಾರು ಅರ್ಧದಷ್ಟು ಜನರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಪ್ರತಿಕ್ರಿಯೆ ನೀಡಿದವರಲ್ಲಿ ಅರ್ಧದಷ್ಟು ಜನರು ಮಾತ್ರ ಯಾವುದಾದರೂ ಒಬ್ಬ ಮುಖ್ಯಮಂತ್ರಿಯ ಹೆಸರನ್ನು ಹೇಳಿದ್ದಾರೆ. ಅವರಲ್ಲಿ ಶೇ.45ರಷ್ಟು ಜನರು, ಕರ್ನಾಟಕದ ಇತಿಹಾಸದಲ್ಲಿಯೇ ಬೊಮ್ಮಾಯಿ ಅಸಮರ್ಥ ಮುಖ್ಯಮಂತ್ರಿಯೆಂದು ಹೇಳಿದ್ದಾರೆ.