ಚುನಾವಣೆ 2023 |ಎರಡು ದೋಣಿಗಳ ಮೇಲೆ ಸೋಮಣ್ಣ; ಕೈಹಿಡಿವರೇ ಬಿಎಸ್‌ವೈ ಬೆಂಬಲಿಗರು

Date:

Advertisements
ವರುಣಾಗೆ ವಿಜಯೇಂದ್ರ ಬರಲಿಲ್ಲವೆಂದು ಲಿಂಗಾಯತ ಬಿಜೆಪಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಚಾಮರಾಜನಗರದ ಮತದಾರರು 'ಗೋ ಬ್ಯಾಕ್‌ ಸೋಮಣ್ಣ' ಎನ್ನುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ತೀವ್ರ ವಿರೋಧ ಎದುರಿಸುತ್ತಿರುವ ಸೋಮಣ್ಣ ಪಾಲಿಗೆ ಎರಡೂ ಕ್ಷೇತ್ರಗಳೂ ಸವಾಲಾಗಿವೆ.

ವಸತಿ ಸಚಿವ ವಿ ಸೋಮಣ್ಣ ಅವರು ತಮ್ಮ ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಅತ್ಯಂತ ಕಠಿಣ ಚುನಾವಣೆಯನ್ನು ಈ ಬಾರಿ ಎದುರಿಸುತ್ತಿದ್ದಾರೆ. ಅಹಿಂದ ಪ್ರಬಲ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಸೋಮಣ್ಣರನ್ನು ಬಿಜೆಪಿ ಕಣಕ್ಕಿಳಿಸಿದೆ.

ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಸೋಮಣ್ಣ ಅವರಿಗೆ ಗೋವಿಂದರಾಜನಗರದಲ್ಲಿ ಟಿಕೆಟ್‌ ನೀಡಲಾಗಿಲ್ಲ. ಬದಲಾಗಿ ವರುಣಾ ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಲಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿಯೂ ಸೋಮಣ್ಣಗೆ ಭಾರೀ ಪೈಪೋಟಿ ಇರಲಿದ್ದು, ಗೆಲ್ಲುವುದು ಅಷ್ಟು ಸುಲಭವಿಲ್ಲ ಎನ್ನಲಾಗುತ್ತಿದೆ.

ಈ ಹಿಂದೆ, ವರುಣಾದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ವಿಜಯೇಂದ್ರರನ್ನು ಅಲ್ಲಿಂದ ಕಣಕ್ಕಿಳಿಸಲು ಯಡಿಯೂರಪ್ಪ ಹಿಂದೇಟು ಹಾಕಿದ್ದರು. ವಿಜಯೇಂದ್ರರನ್ನು ಶಿಕಾರಿಪುರದಿಂದ ಕಣಕ್ಕಿಳಿಸಿರುವ ಪಕ್ಷ, ವರುಣಾದಲ್ಲಿ ಕಣಕ್ಕಿಳಿಸಬೇಕೆಂಬ ನಿರ್ಧಾರದಿಂದ ಹಿಂದೆ ಸರಿದಿದೆ.

Advertisements

ವಿಜಯೇಂದ್ರರೇ ವರುಣಾದಲ್ಲಿ ಸ್ಪರ್ಧಿಸುತ್ತಾರೆಂದು ನಿರೀಕ್ಷೆಯಲ್ಲಿದ್ದ ಅಲ್ಲಿನ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ. ಕ್ಷೇತ್ರದಲ್ಲಿ ಪ್ರಚಾರ ಮಾಡಿ, ಮತದಾರರನ್ನು ಒಲಿಸಿಕೊಳ್ಳುವುದಕ್ಕೂ ಮುನ್ನ, ಸೋಮಣ್ಣ ಪಕ್ಷದ ಕಾರ್ಯಕರ್ತರನ್ನು ಸಮಾಧಾನ ಪಡಿಸುವ ಮತ್ತು ಉತ್ಸಾಹದಿಂದ ಕೆಲಸ ಮಾಡುವಂತೆ ಸ್ಪೂರ್ತಿ ತುಂಬುವ ಕೆಲಸವನ್ನೂ ಮಾಡಬೇಕಿದೆ. ಇದು ಸೋಮಣ್ಣಗೆ ದೊಡ್ಡ ಸವಾಲೂ ಕೂಡ ಹೌದು.

ಒಂದು ವೇಳೆ, ಲಿಂಗಾಯತ ಕಾರ್ಯಕರ್ತರ ಮನವೊಲಿಸಿದರೂ, ಕ್ಷೇತ್ರದಲ್ಲಿ ಪ್ರಬಲವಾಗಿರುವ ಎಸ್‌ಸಿ/ಎಸ್‌ಟಿಗಳು ಮತ್ತು ಇತರ ಸಮುದಾಯಗಳನ್ನು ಬಿಜೆಪಿಯತ್ತ ಸೆಳೆಯುವುದು, ಅವರು ತಮಗೆ ಮತ ಹಾಕುವಂತೆ ಓಲೈಸುವುದು ಮತ್ತೊಂದು ತ್ರಾಸದಾಯಕ ಕೆಲಸವಾಗಿದೆ. ಇದೆಲ್ಲದರ ನಡುವೆ ಶುಕ್ರವಾರ ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸೋಮಣ್ಣ, ಯಡಿಯೂರಪ್ಪ ಅವರ ಆಪ್ತ, 2018ರ ಚುನಾವಣೆಯಲ್ಲಿ ವರುಣಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕಾಪು ಸಿದ್ದಲಿಂಗಸ್ವಾಮಿಯನ್ನು ಭೇಟಿ ಮಾಡಿ, ಬೆಂಬಲ ಕೇಳಿದ್ದಾರೆ.

ಸದ್ಯ, ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧಿಸುತ್ತಾರೆ ಎಂಬ ಮಾತುಗಳಿಗೆ ಕಾಂಗ್ರೆಸ್‌ ತೆರೆ ಎಳೆದಿದೆ. ಸಿದ್ದರಾಮಯ್ಯ ವರುಣಾದಲ್ಲಿ ಮಾತ್ರವೇ ಅಖಾಡಕ್ಕಿಳಿದಿದ್ದಾರೆ. ಕ್ಷೇತ್ರದ ಮುಖಂಡರು ಹಾಗೂ ಮತದಾರರೊಂದಿಗೆ ಸಂಪರ್ಕದಲ್ಲಿದ್ದಾರೆ. ಅಲ್ಲದೆ, ಇದು ತಮ್ಮ ಅಂತಿಮ ಚುನಾವಣೆ ಎನ್ನುವ ಮೂಲಕ ಸಿದ್ದರಾಮಯ್ಯ ಭಾವನಾತ್ಮಕವಾಗಿಯೂ ಜನರನ್ನು ಸೆಳೆಯುತ್ತಿದ್ದಾರೆ. ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಅಗತ್ಯ ವಾತಾವರಣವನ್ನೂ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಹಾಲಿ ಶಾಸಕ ಯತೀಂದ್ರ ಕೂಡ ತಮ್ಮ ತಂದೆಯ ಪರವಾಗಿ ಕಸರತ್ತು ನಡೆಸುತ್ತಿದ್ದಾರೆ.

ಈ ಹೊತ್ತಿನಲ್ಲಿ, ಮತದಾನಕ್ಕೆ ಇನ್ನು 25 ದಿನಗಳು ಮಾತ್ರವೇ ಬಾಕಿ ಇರುವಾಗ ಸೋಮಣ್ಣ ಅವರ ಪಾಲಿಗೆ 220 ಗ್ರಾಮಗಳನ್ನು ಸುತ್ತುವುದು ಸುಲಭದ ಕೆಲಸವಾಗಿಲ್ಲ. ಜೊತೆಗೆ, ಚಾಮರಾಜನಗರದಲ್ಲಿಯೂ ಸ್ಪರ್ಧಿಸಿರುವ ಸೋಮಣ್ಣಗೆ ಆ ಕ್ಷೇತ್ರವೂ ನಿರಾಶಾದಾಯಕವಾಗಿದೆ. ಆ ಕ್ಷೇತ್ರವನ್ನು ಸಿದ್ದರಾಮಯ್ಯ ಅವರ ಆಪ್ತ, ಉಪ್ಪಾರ ಸಮುದಾಯದ ಶಾಸಕ ಪುಟ್ಟರಂಗಶೆಟ್ಟಿ ಪ್ರತಿನಿಧಿಸುತ್ತಿದ್ದಾರೆ. ಈ ಬಾರಿಯೂ ಅವರೇ ಕಣದಲ್ಲಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಬಿ.ಎಲ್ ಸಂತೋಷ್-ಯಡಿಯೂರಪ್ಪರ ದೋಸ್ತಿ-ಕುಸ್ತಿಗೆ ಕಂಗಾಲಾದ ಕರ್ನಾಟಕ

ಶೆಟ್ಟಿ ವಿರುದ್ಧ ಹಲವು ದಲಿತ ಮುಖಂಡರು ಹರಿಹಾಯ್ದಿದ್ದಾರೆ. ಶಾಸಕರಾಗಿ ಶೆಟ್ಟಿ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಿಲ್ಲವೆಂಬ ಆರೋಪಗಳೂ ಇವೆ. ಆದರೂ, ಲಿಂಗಾಯತರು, ದಲಿತರು, ಉಪ್ಪಾರರು, ಕುರುಬರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಕ್ಷೇತ್ರದಲ್ಲಿದ್ದು, ಎಸ್‌ಟಿ ಮತಗಳು ಒಡೆಯದಿದ್ದರೆ ಶೆಟ್ಟಿ ಅವರೇ ಮತ್ತೊಮ್ಮೆ ಗೆಲ್ಲಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ.

ಜೊತೆಗೆ, ಮಾಜಿ ಎಂಎಲ್‌ಸಿ ಮಲ್ಲಿಕಾರ್ಜುನಪ್ಪ ಬಿಜೆಪಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿದ್ದಾರೆ. ಅವರಲ್ಲದೆ, ಪಕ್ಷದಲ್ಲಿ ಕಳೆದ ಕೆಲವು ವರ್ಷಗಳಿಂದ ಅವಿರತವಾಗಿ ಕೆಲಸ ಮಾಡಿದ್ದ ಮತ್ತು ಟಿಕೆಟ್‌ ಆಕಾಂಕ್ಷಿಗಳಾಗಿದ್ದ ರುದ್ರೇಶ್ ಮತ್ತು ನಾಗಶ್ರೀ ಅವರೂ ಅಸಮಾಧಾನಗೊಂಡಿದ್ದಾರೆ. ಮಾಜಿ ಶಾಸಕ ಗುರುಸ್ವಾಮಿ ಪುತ್ರಿಯಾಗಿರುವ ನಾಗಶ್ರೀ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದು, ಶೀಘ್ರದಲ್ಲೇ ತಮ್ಮ ಮುಂದಿನ ರಾಜಕೀಯ ನಡೆಯನ್ನು ಪ್ರಕಟಿಸುವ ಸಾಧ್ಯತೆ ಇದೆ.

ಅಲ್ಲದೆ, ಬಿಜೆಪಿ ವಕ್ತಾರ ಆಯ್ಯನಪುರ ಶಿವಕುಮಾರ್‌ ಬಹಿರಂಗವಾಗಿಯೇ ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾತ್ರವಲ್ಲ, ಕ್ಷೇತ್ರದ ಅಮಚವಾಡಿ ಮತ್ತು ಚನ್ನಪ್ಪನಪುರ ಗ್ರಾಮಗಳ ಜನರು ‘ಗೋ ಬ್ಯಾಕ್‌ ಸೋಮಣ್ಣ‘ ಎಂಬ ಬ್ಯಾನರ್‌ ಕಟ್ಟಿ, ಸೋಮಣ್ಣ ವಿರುದ್ಧ ಗುಡುಗಿದ್ದಾರೆ.

ಹೀಗಾಗಿ, ಚಾಮರಾಜನಗರದಲ್ಲೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯತೆ ಸೋಮಣ್ಣಗಿದೆ. ಚಾಮರಾಜನಗರದಲ್ಲಿ ತಮಗೆ ನೆರವು ನೀಡುವಂತೆ ಬಿಜೆಪಿ ಸಂಸದ ಶ್ರೀನಿವಾಸ್‌ ಪ್ರಸಾದ್‌ವನ್ನು ಸೋಮಣ್ಣ ಭೇಟಿ ಮಾಡಿಬಂದಿದ್ದಾರೆ. ಎಲ್ಲರೂ ಬೆಂಬಲ ನೀಡಿದರೆ ಮಾತ್ರವೇ ಚಾಮರಾಜನಗರದಲ್ಲಿ ಮುಖ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೂ ಗೆಲ್ಲುತ್ತಾರೆಂದು ಹೇಳಲಾಗದು.

ದೋಣಿಯ ಮೇಲೆ ಕಾಲಿಟ್ಟು, ಯಾವ ದೋಣಿಯಲ್ಲೂ ದಡ ಸೇರಲಾಗದ ಪರಿಸ್ತಿತಿಯಲ್ಲಿ ಸೋಮಣ್ಣ ಇದ್ದಾರೆ. ಬಿಜೆಪಿ ಹೈಕಮಾಂಡ್‌ ಉದ್ದೇಶ ಪೂರ್ವಕವಾಗಿಯೇ ಅವರನ್ನು ಈ ಪರಿಸ್ಥಿತಿಗೆ ದೂಡಿದೆ ಎಂದು ಹೇಳಲಾಗುತ್ತಿದೆ. ಮೂರು ಪಕ್ಷಗಳಲ್ಲೂ ಆಡಿಕೊಂಡು ಬಂದಿರುವ ಸೋಮಣ್ಣ, ಬಿಜೆಪಿಯಲ್ಲಿದ್ದುಕೊಂಡೇ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಆಗಾಗ್ಗೆ ಗುಡುಗುತ್ತಿದ್ದರು. ತಮ್ಮ ಮಗನಿಗೆ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದ ಸೋಮಣ್ಣ, ಯಡಿಯೂರಪ್ಪ-ವಿಜಯೇಂದ್ರ ವಿರುದ್ಧವೂ ಮಾತನಾಡಿದ್ದರು. ಹೀಗಾಗಿ, ಸೋಮಣ್ಣರನ್ನು ಬಲಿಯಾಕಬೇಕೆಂದು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಹಾಗಾಗಿಯೇ, ವರುಣಾ ಮತ್ತು ಚಾಮರಾಜನಗರದಂತಹ ಪ್ರಬಲ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಸೋಮಣ್ಣರನ್ನು ಹರಕೆಯ ಕುರಿಯಾಗಿಸಿದ್ದಾರೆ ಎನ್ನಲಾಗಿದೆ.

ಈ ಎಲ್ಲ ಕಾರಣಗಳಿಂಗಾಗಿ ಸೋಮಣ್ಣಗೆ ಎರಡೂ ಕ್ಷೇತ್ರಗಳು ಗೆಲ್ಲುವ ಕ್ಷೇತ್ರಗಳಾಗಿಲ್ಲ. ಒಂದನ್ನು ನಿರ್ಲಕ್ಷಿಸಿ, ಮತ್ತೊಂದರಲ್ಲಿ ಪ್ರಚಾರ ಮಾಡಿಬಿಡುವಷ್ಟು ಅವಕಾಶ ಸೋಮಣ್ಣಗಿಲ್ಲ. ಸೋಮಣ್ಣ ಯಾವೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಚುನಾವಣೆಯನ್ನು ಗಂಭೀರವಾಗಿ ಎದುರಿದರೂ ಗೆಲುವು ಸಾವಾಲಾಗಿಯೇ ಇದೆ. ಯಾವ ಕ್ಷೇತ್ರದಲ್ಲಿ ಮತದಾರರು ಸೋಮಣ್ಣಗೆ ಮಣೆ ಹಾಕುತ್ತಾರೆ ಎಂಬುದಕ್ಕೆ ಚುನಾವಣಾ ಕಣ ಉತ್ತರ ನೀಡಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X