ಮೈಸೂರು ಬೇಡ, ಚಾಮರಾಜನಗರವೂ ಬೇಡ, ಗೋವಿಂದರಾಜನಗರವೇ ಸಾಕು ಎನ್ನುತ್ತಿದ್ದ ಸೋಮಣ್ಣ ಅವರಿಗೆ ಗೋವಿಂದರಾಜನಗರ ಕೈತಪ್ಪಿದೆ. ಸೋಮಣ್ಣಗೆ ಬಿಜೆಪಿ ಮೈಸೂರಿನ ವರುಣಾ ಮತ್ತು ಚಾಮರಾಜನಗರದ ಎರಡು ಟಿಕೆಟ್‌ಗಳನ್ನು ನೀಡಿದೆ. ಒಲ್ಲದ ಮನಸ್ಸಿನಲ್ಲೇ ಆ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಒಪ್ಪಿರುವ ವಸತಿ ಸಚಿವ, ವರುಣಾ ಕ್ಷೇತ್ರಕ್ಕೆ ಪ್ರವೇಶಿಸುವ ಮುನ್ನವೇ ದೇವರ ಮೊರೆಹೋಗಿದ್ದಾರೆ. ಸದ್ಯ ‘ಟೆಂಪಲ್ ರನ್’ ನಡೆಸುತ್ತಿದ್ದಾರೆ.
ಗುರುವಾರ ಬೆಳಂಬೆಳಗ್ಗೆಯೇ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸೋಮಣ್ಣ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ, ಸುತ್ತೂರು ಮಠಕ್ಕೂ ಭೇಟಿ ನೀಡಿ, ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯ ಆಶೀರ್ವಾದ ಪಡೆದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, “ನಾನು ಮೊದಲಿಂದಲೂ ದೇವರನ್ನು ಹೆಚ್ಚಾಗಿ ನಂಬುತ್ತೇನೆ. ಹಾಗಾಗಿ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದೇನೆ. ನಂಜನಗೂಡಿಗೆ ಹೋಗುತ್ತೇನೆ. ಬಳಿಕ, ವರುಣಾದಲ್ಲಿ ಏಪ್ರಿಲ್ 14ರಿಂದ ಪ್ರಚಾರ ಆರಂಭಿಸುತ್ತೇನೆ. ಆ ಕ್ಷೇತ್ರದಿಂದ ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸುತ್ತೇನೆ. ಚಾಮರಾಜನಗರದಲ್ಲಿ ಏಪ್ರಿಲ್ 19ರಂದು ನಾಮಪತ್ರ ಸಲ್ಲಿಸುತ್ತೇನೆ” ಎಂದಿದ್ದಾರೆ.
ಸಿದ್ದರಾಮಯ್ಯ ಮತ್ತು ನಾನು ಒಂದೇ ಗರಡಿಯಲ್ಲಿ ಪಳಗಿದವರು. ಸಿದ್ದರಾಮಯ್ಯ ನನ್ನಂತೆ ಒಬ್ಬ ಅಭ್ಯರ್ಥಿ ಮಾತ್ರ. ವರುಣಾದಲ್ಲಿ ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ನನ್ನೊಂದಿಗಿದ್ದಾರೆ. ಅವರೇ ನನ್ನನ್ನು ಗೆಲ್ಲಿಸುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ?: ಮೋದಿ ರಾಜ್ಯಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ; ಸಿದ್ದರಾಮಯ್ಯ ಪ್ರಶ್ನೆ
ನಾಮಪತ್ರ ಸಲ್ಲಿಸಲಷ್ಟೇ ವರುಣಾಗೆ ಬರುತ್ತೇನೆ. ಉಳಿದಂತೆ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದು ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಈಗ ವರುಣಾದಲ್ಲಿ ಲಿಂಗಾಯತ ಸಮುದಾಯದ ಸೋಮಣ್ಣ ಅಭ್ಯರ್ಥಿಯಾಗಿರುವುದರಿಂದ ಸಿದ್ದರಾಮಯ್ಯ ಅವರಿಗೆ ಕ್ಷೇತ್ರವು ಕದನ ಕಣವಾಗಿ ಮಾರ್ಪಟ್ಟಿದೆ. ವರುಣಾದಲ್ಲಿ ಲಿಂಗಾಯತ ಮತದಾರರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಆ ಸಮುದಾಯವು ಸೋಮಣ್ಣ ಪರವಾಗಿ ನಿಲ್ಲುವ ಸಾಧ್ಯತೆಯೂ ಹೆಚ್ಚಾಗಿದ್ದು, ಸಿದ್ದರಾಮಯ್ಯ ಕ್ಷೇತ್ರದಲ್ಲಿ ಉಳಿದು, ಪ್ರಚಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.