- ನಾಮಪತ್ರ ಸಲ್ಲಿಕೆಗೆ ಏಳು ದಿನಗಳ ಕಾಲಾವಕಾಶ
- ಮೇ 10ಕ್ಕೆ ಮತದಾನ, ಮೇ 13ಕ್ಕೆ ಫಲಿತಾಂಶ
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಇಂದಿನಿಂದ (ಏ.13) ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ.
ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರದಿಂದಲೇ ಆರಂಭವಾಗಲಿದ್ದು, ಒಟ್ಟು ಏಳು ದಿನ ಅವಕಾಶ ಇರುತ್ತದೆ. ಏ.20 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ.
ಏ.21ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಾಸು ಪಡೆಯಲು ಏ.24ರಂದು ಕೊನೆಯ ದಿನವಾಗಿದೆ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.
ಜೆಡಿಎಸ್ ಈಗಾಗಲೇ 93 ಕ್ಷೇತ್ರಕ್ಕೆ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಎರಡು ಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 165 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಹಾಗೆಯೇ ಬಿಜೆಪಿ ಎರಡು ಪಟ್ಟಿ ಬಿಡುಗಡೆ ಮಾಡಿದ್ದು, 212 ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿದೆ
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಅವಧಿ ಇದ್ದರೂ ಬಿಜೆಪಿ ತೊರೆಯುತ್ತಿರುವ ಸಾಲು ಸಾಲು ಎಂಎಲ್ಸಿಗಳು
ಗುರುವಾರದಿಂದ ಮತ್ತಷ್ಟು ಚುನಾವಣೆ ಬೆಳವಣಿಗೆಗಳು ಗರಿಗೆದರಲಿದ್ದು, ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲು ಪ್ರಮುಖವಾಗಿ ಮೂರು ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ.
ಬಿಜೆಪಿಯೊಳಗೆ ಬಂಡಾಯ ಮತ್ತಷ್ಟು ಭುಗಿಲೆದ್ದಿದ್ದು, ಅನೇಕ ನಾಯಕರು ಉಳಿದ ಪಕ್ಷಗಳಿಗೆ ಹಾರುತ್ತಾರಾ ಅಥವಾ ಪಕ್ಷೇತರವಾಗಿ ನಿಲ್ಲುತ್ತಾರಾ ಎಂಬ ಪ್ರಶ್ನೆಗೆ ಈ ಏಳು ದಿನದಲ್ಲಿ ಉತ್ತರ ಸಿಗಲಿದೆ.
16ನೇ ವಿಧಾನಸಭೆ ಚುನಾವಣೆಗೆ ರಾಜ್ಯದಲ್ಲಿ ಒಟ್ಟು 5.24 ಕೋಟಿ ಮತದಾರರಿದ್ದು ಇದರಲ್ಲಿ ಪುರುಷರು 2.63 ಕೋಟಿ ಹಾಗೂ ಮಹಿಳೆಯರು 2.60 ಕೋಟಿ ಇದ್ದಾರೆ.