- ಚುನಾವಣಾ ಆಯೋಗದ ಶಿಫಾರಸ್ಸಿನಂತೆ ಅಧಿಸೂಚನೆ ಪ್ರಕಟ
- 2023ರ ಮೇ 24ಕ್ಕೆ ಕೊನೆಯಾಗಲಿರುವ ಹಾಲಿ ಸರ್ಕಾರದ ಅವಧಿ
ಪ್ರಸಕ್ತ ಸಾಲಿನ (2023ನೇ) ಸಾಲಿನ ರಾಜ್ಯ ವಿಧಾನಸಭೆ ಚುನಾವಣೆಯ ಅಧಿಸೂಚನೆ ಪ್ರಕಟವಾಗಿದೆ.
ರಾಜ್ಯಪಾಲರ ಆದೇಶದಂತೆ ಹೊರಡಿಸಲಾದ ಅಧಿಸೂಚನೆಯಲ್ಲಿ ರಾಜ್ಯ ಚುನಾವಣೆಗಾಗಿನ ಅಗತ್ಯ ಕ್ರಮ ಮತ್ತು ಕಾರ್ಯ ಯೋಜನೆಗಳಿಗೆ ಚಾಲನೆ ನೀಡುವಂತೆ ಸೂಚಿಸಲಾಗಿದೆ.
ಭಾರತದ ಚುನಾವಣಾ ಆಯೋಗವು ಶಿಫಾರಸು ಮಾಡಿದಂತೆ, ಸದರಿ ಅಧಿನಿಯಮದ ಸೆಕ್ಷನ್ 15 ರ ಉಪವಿಭಾಗ (2)ರ ಅನುಸಾರವಾಗಿ, ಕರ್ನಾಟಕ ರಾಜ್ಯದ ರಾಜ್ಯಪಾಲರು, ಅಧಿಸೂಚನೆ ಹೊರಡಿಸಿದ್ದಾರೆ.
ಸದರಿ ಕಾಯಿದೆಯ ನಿಬಂಧನೆಗಳು ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳು ಮತ್ತು ಆದೇಶಗಳ ಅನುಸಾರವಾಗಿ ರಾಜ್ಯದ ಶಾಸನ ಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ಅವರು ನಾಗರಿಕರನ್ನು ಕೋರಿಕೊಂಡಿದ್ದಾರೆ.
ಅದರಂತೆ ಚುನಾವಣೆ ಸಲುವಾಗಿನ ನಾಮಪತ್ರ ಸಲ್ಲಿಕೆ ಕಾರ್ಯ ಇಂದಿನಿಂದ ಆರಂಭವಾಗಿದೆ.
ಉಳಿದಂತೆ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕಡೆಯ ದಿನವಾದರೆ, 21ನೇ ಏಪ್ರಿಲ್ ನಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಇಂದಿನಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಶುರು
ಹಾಗೆಯೇ ಏಪ್ರಿಲ್ 24ರಂದು ಉಮೇದುವಾರಿಕೆ ಹಿಂಪಡೆಯಲು(ನಾಮಪತ್ರ ವಾಪಾಸಿಗೆ) ಕಾಲಾವಕಾಶ ಕಲ್ಪಿಸಲಾಗಿದೆ.
ಮೇ 10ಕ್ಕೆ ಮತದಾನ ನಡೆಯಲಿದ್ದು 13ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ. ಅಂತಿಮವಾಗಿ ಮೇ 15ಕ್ಕೆ ಚುನಾವಣಾ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿದೆ. ಅಂದ ಹಾಗೆ ಹಾಲಿ ಸರ್ಕಾರ ಮತ್ತು ವಿಧಾನಸಭೆಯ ಅವಧಿ ಮೇ 24, 2023 ರವರೆಗೆ ಇರಲಿದೆ.