ಚುನಾವಣೆ ವಿಶೇಷ | ಬಸವನಗುಡಿ ಬ್ರಾಹ್ಮಣರ ಕ್ಷೇತ್ರವೇ?

Date:

Advertisements

ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಇಲ್ಲಿ ಜಾತಿ ಮುಖ್ಯವಲ್ಲ. ಗೆದ್ದವರನ್ನು ಜಾತಿಗೆ ಸೀಮಿತಗೊಳಿಸುವಂತೆಯೂ ಇಲ್ಲ. ಬ್ರಾಹ್ಮಣರು ಬ್ರಾಹ್ಮಣರಿಗೇ ಮತ ಹಾಕದೆ ಸೋಲಿಸಿರುವುದೂ ಇದೆ. ಹಾಗೆಯೇ ಅಬ್ರಾಹ್ಮಣರು ನವಬ್ರಾಹ್ಮಣರಾಗಿ ಬ್ರಾಹ್ಮಣರನ್ನು ಗೆಲ್ಲಿಸಿರುವುದೂ ಇದೆ

ಬೆಂಗಳೂರಿನ ಬಸವನಗುಡಿ ಎಂದಾಕ್ಷಣ ಎಲ್ಲರ ಕಣ್ಣಮುಂದೆ ನಿಲ್ಲುವುದು ದೊಡ್ಡ ಬಸವಣ್ಣ ಮತ್ತು ಕಡಲೆಕಾಯಿ ಪರಿಷೆ. ಅದಕ್ಕೊಂದು ಇತಿಹಾಸವಿದೆ, ಶ್ರಮಜೀವಿಗಳ ಕತೆ ಇದೆ. ನಗರವಾಗುವುದಕ್ಕೂ ಮುನ್ನ ಸುಂಕನಹಳ್ಳಿಯ ಸುತ್ತಮುತ್ತಲ ರೈತರು, ಅಲ್ಲಿ ಕೃಷಿ ಮಾಡುತ್ತಿದ್ದರು. ರೈತರು ಬೆಳೆದ ಕಡಲೆಕಾಯಿಯನ್ನು ರಾತ್ರಿ ವೇಳೆ ಬಸವಣ್ಣ ತಿಂದು ಹೋಗುತ್ತಿತ್ತು. ರೈತರು ಕಾದಿದ್ದು ಆ ಬಸವನನ್ನು ಹಿಡಿಯಲು ಪ್ರಯತ್ನಿಸಿದಾಗ, ಅದು ಓಡಿ ಗುಡ್ಡ ಏರಿ ಮಾಯವಾಯಿತು. ಹಿಂಬಾಲಿಸಿದ ರೈತರಿಗೆ ಗುಡ್ಡದಲ್ಲಿ ಕಂಡದ್ದು ಕಲ್ಲಾಗಿ ನಿಂತ ಬಸವ. ಅಷ್ಟೇ ಅಲ್ಲ, ಆ ಕಲ್ಲಿನ ಬಸವ ಬೃಹದಾಕಾರವಾಗಿ ಬೆಳೆಯಿತು. ಆ ಕಲ್ಲಿನ ಬಸವನೇ ಈಗ ಗುಡ್ಡದ ಮೇಲಿರುವ ದೊಡ್ಡ ಬಸವಣ್ಣ.

ಆ ಬಸವನೇ ಈಶ್ವರನ ವಾಹನ ನಂದಿ ಎಂದು ಭಾವಿಸಿದ ಭಕ್ತ ರೈತರು, ಪುಟ್ಟ ಗುಡಿ ಕಟ್ಟಿ ಪೂಜಿಸಲು ಪ್ರಾರಂಭಿಸಿದರು. ಮಾಡಿದ ತಪ್ಪಿಗೆ ಸುಂಕ ಕಟ್ಟುವ ನೆಪದಲ್ಲಿ ತಾವು ಬೆಳೆಯುವ ಕಡಲೆಕಾಯಿ ಬೆಳೆಯನ್ನು ತಿನ್ನಲು, ಕಾವಲು ಕಾಯಲು, ಆ ಬಸವನಿಗೇ ಜವಾಬ್ದಾರಿ ವಹಿಸಿದರು. ಆನಂತರ ಬೆಂಗಳೂರಿನ ಕೆಂಪೇಗೌಡರು ದೊಡ್ಡ ದೇವಸ್ಥಾನ ಕಟ್ಟಿಸಿದರು. ಅದಕ್ಕಾಗಿ ಪ್ರತಿ ವರ್ಷ ಕಾರ್ತೀಕ ಮಾಸದ ಕಡೇ ಸೋಮವಾರ ರೈತರು ಬೆಳೆದ ಕಡಲೆಕಾಯಿಯನ್ನು ಇಲ್ಲಿ ರಾಶಿ ಹಾಕುತ್ತಾರೆ ಮತ್ತು ಬಸವನಿಗೆ ಮನಸೋಯಿಚ್ಛೆ ತಿನ್ನೆಂದು ಪ್ರಾರ್ಥಿಸುತ್ತಾರೆ. ಅದೇ ಪ್ರತಿ ವರ್ಷ ನಡೆಯುವ ಕಡಲೆಕಾಯಿ ಪರಿಷೆ. ಈ ಪರಿಷೆಗೆ ಸುತ್ತಮುತ್ತಲಿನ ಹನುಮಂತನಗರ, ಶ್ರೀನಗರ, ಕತ್ತರಿಗುಪ್ಪೆ, ಹೊಸಕರೆಹಳ್ಳಿ, ಬ್ಯಾಟರಾಯನಪುರದ ರೈತರು ಬರುತ್ತಾರೆ, ಬಸವನಿಗೆ ಪೂಜೆ ಸಲ್ಲಿಸುತ್ತಾರೆ.

ಕಾಲಾಂತರದಲ್ಲಿ ಅದು ನಗರಪ್ರದೇಶವಾಗಿ, ವಾಣಿಜ್ಯ ವ್ಯವಹಾರಗಳ ಕೇಂದ್ರವಾಗಿ ಮಾರ್ಪಾಡಾದರೂ, ಪ್ರತಿ ವರ್ಷ ನಡೆಯುವ ಪರಿಷೆ ಮಾತ್ರ ನಿಂತಿಲ್ಲ. ಅದರೊಂದಿಗೆ ದೊಡ್ಡ ಗಣಪತಿ ದೇವಸ್ಥಾನ, ಬ್ಯೂಗಲ್ ರಾಕ್ ಪಾರ್ಕ್; ಅದಕ್ಕೆ ಹೊಂದಿಕೊಂಡಂತೆ ಬಿಎಂಎಸ್ ಕಾಲೇಜು, ಡಿವಿಜಿ ರಸ್ತೆ, ಗಾಂಧಿ ಬಜಾರ್, ಠಾಗೂರ್ ಸರ್ಕಲ್, ಬಸವನಗುಡಿ ಕ್ಲಬ್, ನ್ಯಾಷನಲ್ ಕಾಲೇಜು, ರಾಮಕೃಷ್ಣ ಆಶ್ರಮಗಳೆಲ್ಲ ಸೇರಿ ಬಸವನಗುಡಿಗೊಂದು ವಿಶೇಷ ಕಳೆ ಬಂದಿದೆ. ಜೊತೆಗೆ ಹೆಸರಾಂತ ಸಾಹಿತಿಗಳಾದ ಡಿವಿ ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಲಂಕೇಶ್, ವೈಎನ್ಕೆ ಮನೆಗಳು ಕೂಡ ಇದೇ ಏರಿಯಾದಲ್ಲಿದ್ದು, ಸಾಂಸ್ಕೃತಿಕ ಆಯಾಮ ಒದಗಿಬಂದಿದೆ. ಇನ್ನು ದ್ವಾರಕಾ-ವಿದ್ಯಾರ್ಥಿಭವನ್-ಎಂಟಿಆರ್ ಗಳಂತಹ ಸುಮಾರು 75 ವರ್ಷಗಳಿಗೂ ಹಿಂದಿನ ಹೋಟೆಲ್ ಗಳಿದ್ದು, ಬೆಂಗಳೂರಿನ ಹಳೆಯ ಏರಿಯಾಗಳಲ್ಲೊಂದು ಎಂಬ ಹೆಸರು ಪಡೆದಿದೆ.

Advertisements

ಇಂತಹ ಚಾರಿತ್ರಿಕ ಹಿನ್ನೆಲೆಯುಳ್ಳ ಶ್ರಮಿಕರ ಬೀಡಾದ ಬಸವನಗುಡಿಯನ್ನು ರಾಜಕೀಯ ಪಕ್ಷಗಳು ಬ್ರಾಹ್ಮಣರ ಕ್ಷೇತ್ರ ಎಂದೇ ಭಾವಿಸಿವೆ. ಮಾಧ್ಯಮಗಳು ಕೂಡ ಅದನ್ನೇ ಬಿಂಬಿಸಿ, ಮತದಾರರು ಕೂಡ ಅದನ್ನೇ ನಂಬುವಂತೆ ಮಾಡಿವೆ. ಅಸಲಿಗೆ, ಬಸವನಗುಡಿ ಕ್ಷೇತ್ರ ಬ್ರಾಹ್ಮಣರದ್ದಲ್ಲ. ಬ್ರಾಹ್ಮಣರ ಸಂಖ್ಯೆಯೂ ಹೆಚ್ಚಾಗಿಲ್ಲ. 1952ರಿಂದ 2018ರವರೆಗಿನ ವಿಧಾನಸಭಾ ಚುನಾವಣೆಗಳಲ್ಲಿ, ಗೆದ್ದವರಲ್ಲಿ 7 ಜನ ಬ್ರಾಹ್ಮಣರಾದರೆ, 9 ಜನ ಅಬ್ರಾಹ್ಮಣರು ಎಂಬುದು ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಆದರೂ ಬಸವನಗುಡಿ ಎಂದಾಕ್ಷಣ ಬ್ರಾಹ್ಮಣರ ಕ್ಷೇತ್ರ ಎಂದು ಬ್ರ್ಯಾಂಡ್ ಮಾಡಲಾಗಿದೆ. ಇದು ಯಾರಿಗೆ ಲಾಭ, ಯಾಕಾಗಿ ಹಾಗೆ ಮಾಡಿದ್ದಾರೆ, ಹೇಳುತ್ತಿದ್ದಾರೆ ಎನ್ನುವುದನ್ನು ಮತದಾರರು ಅರಿಯಬೇಕಿದೆ.

ಬಸವನಗುಡಿ ವಿಧಾನಸಭಾ ಕ್ಷೇತ್ರದ ಪಕ್ಷಗಳು, ಅಭ್ಯರ್ಥಿಗಳು ಮತ್ತು ಗೆದ್ದು-ಸೋತವರ ಬಗ್ಗೆ ಅವಲೋಕಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಹಾಗೆಯೇ ಈ ಕ್ಷೇತ್ರದ ಮತದಾರರ ಒಲವು ಮತ್ತು ವಿಶೇಷತೆಯೂ ತಿಳಿಯುತ್ತದೆ. 1952ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಪಿಆರ್ ರಾಮಯ್ಯ, 1957ರಲ್ಲಿ ಕಾಂಗ್ರೆಸ್ಸಿನ ಎಲ್ಎಸ್ ವೆಂಕಾಜಿರಾವ್, 1962ರಲ್ಲಿ ಕಾಂಗ್ರೆಸ್ಸಿನ ಎಂ ಕೃಷ್ಣಪ್ಪ, 1967ರಲ್ಲಿ ಪಕ್ಷೇತರ ಅಭ್ಯರ್ಥಿ ಪಿ ತಿಮ್ಮಯ್ಯ ಗೆದ್ದಿದ್ದಾರೆ. 1972ರಲ್ಲಿ ಅಮೀರ್ ರಹಮತುಲ್ಲಾ ಖಾನ್ ಎಂಬ ಮುಸ್ಲಿಂ ಅಭ್ಯರ್ಥಿ ಕಾಂಗ್ರೆಸ್ ನಿಂದ ಗೆದ್ದಿದ್ದಾರೆ. 1952ರಿಂದ 72ರವರೆಗೆ, ನಾಲ್ಕು ಸಲ ಕಾಂಗ್ರೆಸ್ ಗೆದ್ದಿದ್ದರೆ, ಒಬ್ಬರು ಪಕ್ಷೇತರ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದು ಸ್ವಾತಂತ್ರ್ಯೋತ್ತರ ಕಾಲವಾದ್ದರಿಂದ, ಕಾಂಗ್ರೆಸ್ ಪ್ರಾಬಲ್ಯವಿದ್ದರೂ, ವಿಭಿನ್ನ ಜಾತಿಯ ಜನ ಈ ಕ್ಷೇತ್ರದಿಂದ ಗೆದ್ದಿರುವುದು ಎದ್ದು ಕಾಣುತ್ತದೆ.

ಮೇಲಿನ ಈ ಫಲಿತಾಂಶಗಳಿಗೆ ವ್ಯತಿರಿಕ್ತವಾಗಿ, ಅಂದರೆ ಕಾಂಗ್ರೆಸ್ ಪಕ್ಷ ಪಕ್ಕಕ್ಕೆ ಸರಿದು, ಜನತಾ ಪಕ್ಷ ಮುನ್ನಲೆಗೆ ಬಂದ ಕಾಲಘಟ್ಟದಲ್ಲಿ, ವ್ಯಕ್ತಿಕೇಂದ್ರಿತ ಚುನಾವಣೆಗಳು ನಡೆದಿರುವುದು ಕಂಡುಬರುತ್ತದೆ. ಸೈಕಲ್ ಮತ್ತು ರಿಕ್ಷಾದಲ್ಲಿ ಓಡಾಡುತ್ತಿದ್ದ, ಸಾಮಾನ್ಯರ ಸೇವಕನೆಂದೇ ಹೆಸರು ಗಳಿಸಿದ್ದ ಎನ್ನಾರ್ ಕಾಲೋನಿಯ ಟಿಆರ್ ಶಾಮಣ್ಣನವರು 1978ರಲ್ಲಿ ಜನತಾ ಪಕ್ಷದಿಂದ ಗೆದ್ದಿದ್ದರು. ಆದರೆ 1980ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಇತ್ತು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ, 1980 ಮತ್ತು 1983ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಎಚ್ಎಲ್ ತಿಮ್ಮೇಗೌಡರು ಗೆದ್ದಿದ್ದರು. ಜನತಾ ಪಕ್ಷದ ನಾಗಾಲೋಟವನ್ನು ಮುಂದುವರೆಸಿದ ರಾಮಕೃಷ್ಣ ಹೆಗಡೆಯವರು 1985 ರಲ್ಲಿ ಗೆದ್ದು, ಕಾಂಗ್ರೆಸ್ಸಿನ ಹಾರನಹಳ್ಳಿ ರಾಮಸ್ವಾಮಿ ಅವರನ್ನು ಪರಾಭವಗೊಳಿಸಿದ್ದರು. ಅಂದರೆ, ಬ್ರಾಹ್ಮಣರಾದ ಶಾಮಣ್ಣ, ಹೆಗಡೆ ಗೆದ್ದಿದ್ದರೂ, ಇದಕ್ಕೆ ವಿರುದ್ಧವಾಗಿ ತಿಮ್ಮೇಗೌಡರು ಎರಡು ಬಾರಿ ಗೆದ್ದು, ಇಲ್ಲಿ ಒಕ್ಕಲಿಗರೂ ಗೆಲ್ಲಬಹುದು ಎಂದು ಸಾಬೀತುಪಡಿಸಿದ್ದರು.

1989ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ, ಬ್ರಾಹ್ಮಣ ಜಾತಿಗೆ ಸೇರಿದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಗೆದ್ದಿದ್ದರು. ಕುತೂಹಲಕರ ಸಂಗತಿ ಎಂದರೆ, 2004ರಲ್ಲಿ, ಮಹಾನಗರ ಪಾಲಿಕೆ ಮೇಯರ್ ಆಗಿದ್ದ, ಬೋವಿ ಜನಾಂಗಕ್ಕೆ ಸೇರಿದ ಕಾಂಗ್ರೆಸ್ಸಿನ ಕೆ ಚಂದ್ರಶೇಖರ್ ಇದೇ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. 1994ರಲ್ಲಿ ಬಿಜೆಪಿಯ ಎಚ್ಎನ್ ನಂಜೇಗೌಡ, 1999ರಲ್ಲಿ ಬಿಜೆಪಿಯ ಕೆಎನ್ ಸುಬ್ಬಾರೆಡ್ಡಿ ಕೂಡ ಇಲ್ಲಿಂದ ಗೆದ್ದಿದ್ದರು. ಇದಕ್ಕೆ ತದ್ವಿರುದ್ಧವಾಗಿ 1989ರ ಚುನಾವಣೆಯಲ್ಲಿ ಮಹಾಬ್ರಾಹ್ಮಣ ಎಂದೇ ಕಾಂಗ್ರೆಸ್ ವಲಯದಲ್ಲಿ ಹೆಸರಾಗಿದ್ದ ಹಾರನಹಳ್ಳಿ ರಾಮಸ್ವಾಮಿಯವರು ಸೋತಿದ್ದರು. ಇವರಷ್ಟೇ ಅಲ್ಲ, ನರಸಿಂಗರಾವ್ ಡಿಎಸ್, ಎನ್ಎಲ್ ರಾವ್, ಎಸ್ಬಿ ಶ್ವೇತಾದ್ರಿ, ಬಿಕೆ ಚಂದ್ರಶೇಖರ್ ಕೂಡ ಸೋತಿದ್ದರು.

ಆದರೆ ಇತ್ತೀಚಿನ ಮೂರು ವಿಧಾನಸಭಾ ಚುನಾವಣೆಗಳಲ್ಲಿ, 2008, 2013 ಮತ್ತು 2018ರಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಿದ ಕಾರಣ, ಅನಿವಾರ್ಯವಾಗಿ ಬಿಜೆಪಿಯ ರವಿ ಸುಬ್ರಮಣ್ಯ ಗೆಲ್ಲುವಂತಾಗಿತ್ತು. ಒಬ್ಬನೇ ವ್ಯಕ್ತಿ, ಒಂದೇ ಪಕ್ಷದಿಂದ ಮೂರು ಬಾರಿ ಆಯ್ಕೆಯಾಗುವುದು ಸಾಮಾನ್ಯವಲ್ಲ, ಸುಲಭವೂ ಅಲ್ಲ. ಆದರೆ, ಎದುರಾಳಿ ಪಕ್ಷಗಳು ಸಮರ್ಥ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸದೇ ಇರುವುದು ಮತ್ತು ಸೋತ ಅಭ್ಯರ್ಥಿಗೆ ಮುಂದಿನ ಚುನಾವಣೆಗೂ ನೀವೇ ಅಭ್ಯರ್ಥಿ ಎಂದು ಹೇಳದೇ ಇರುವುದು ಕೂಡ ಬಿಜೆಪಿ ಕ್ಷೇತ್ರವನ್ನು ಗಟ್ಟಿಗೊಳಿಸಿಕೊಳ್ಳಲು ಅನುಕೂಲವಾಗಿದೆ. ಇದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಅರ್ಥ ಮಾಡಿಕೊಳ್ಳುತ್ತಿಲ್ಲ. ಅರ್ಥವಾಗಿದ್ದರೂ, ಪಕ್ಷದೊಳಗಿನ ಕಿತ್ತಾಟ, ನಾಯಕರ ಸ್ವಾರ್ಥದಾಟ, ಅಭ್ಯರ್ಥಿಗಳ ಮಾರಾಟ- ಇವು ಕೂಡ ಬಿಜೆಪಿಗೆ ಗೆಲುವಾಗಿ ಪರಿಣಮಿಸಿವೆ.

ಹಳೆಯದನ್ನು ಆ ಕ್ಷಣವೇ ಮರೆಯುವ ಮನುಷ್ಯರು, ಸದ್ಯದ ಸುದ್ದಿಯನ್ನೇ ಸತ್ಯವೆಂದು ನಂಬುತ್ತಾರೆ. ಅದಕ್ಕೆ ತಕ್ಕಂತೆ ಮಾಧ್ಯಮಗಳೂ ಸುದ್ದಿ ಮಾಡುತ್ತವೆ. ಹಾಗಾಗಿ ಬಸವನಗುಡಿ ಎಂದರೆ ಬ್ರಾಹ್ಮಣರದು, ಬಿಜೆಪಿಯ ಭದ್ರಕೋಟೆ ಎಂದು ಭ್ರಮಿಸುತ್ತಾರೆ. 2011ರ ಜನಗಣತಿ ಪ್ರಕಾರ ಬಸವನಗುಡಿ ವಿಧಾನಸಭಾ ಕ್ಷೇತ್ರದ ಮತದಾರರ ಸಂಖ್ಯೆ ಸರಿಸುಮಾರು 2,36,600. ಇದರಲ್ಲಿ ಅತ್ಯಧಿಕ ಸಂಖ್ಯೆಯ ಮತದಾರರಿರುವುದು ಒಕ್ಕಲಿಗರು. ಆ ನಂತರ ಬ್ರಾಹ್ಮಣರು. ಅದಾದ ಮೇಲೆ ಕುರುಬರು, ಪರಿಶಿಷ್ಟ ಜಾತಿ/ಪಂಗಡದವರು. ಈ ನಾಲ್ಕು ಜಾತಿಯ ಜನರೇ ಈ ಕ್ಷೇತ್ರದ ಪ್ರಭಾವಿ ಮತದಾರರು. ಇವರ ನಂತರ ನಾಯ್ಡುಗಳು, ಜೈನರು, ಲಿಂಗಾಯತರು, ಮುಸ್ಲಿಮರು, ಕ್ರಿಶ್ಚಿಯನ್ನರು ಇನ್ನಿತರ ಜಾತಿ ಜನರು ಸಣ್ಣ ಸಂಖ್ಯೆಯಲ್ಲಿದ್ದಾರೆ. ಅಂದರೆ ಬ್ರಾಹ್ಮಣರಿಗಿಂತ, ಅಬ್ರಾಹ್ಮಣರ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಇಲ್ಲಿ ಜಾತಿ ಮುಖ್ಯವಲ್ಲ. ಗೆದ್ದವರನ್ನು ಜಾತಿಗೆ ಸೀಮಿತಗೊಳಿಸುವಂತೆಯೂ ಇಲ್ಲ. ಬ್ರಾಹ್ಮಣರು ಬ್ರಾಹ್ಮಣರಿಗೇ ಮತ ಹಾಕದೆ ಸೋಲಿಸಿರುವುದೂ ಇದೆ. ಹಾಗೆಯೇ ಅಬ್ರಾಹ್ಮಣರು ನವಬ್ರಾಹ್ಮಣರಾಗಿ ಬ್ರಾಹ್ಮಣರನ್ನು ಗೆಲ್ಲಿಸಿರುವುದೂ ಇದೆ.

ಆದರೂ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಆಪ್ ಪಕ್ಷಗಳು ಈ ಬಾರಿ ಬ್ರಾಹ್ಮಣ ಅಭ್ಯರ್ಥಿಗಳನ್ನೇ ಮತ್ತೆ ಕಣಕ್ಕಿಳಿಸುತ್ತಿವೆ. ಬಿಜೆಪಿಯಿಂದ ಮೂರು ಬಾರಿ ಗೆದ್ದಿರುವ, ನಾಲ್ಕನೇ ಬಾರಿಗೆ ಗೆದ್ದು ಸಚಿವರಾಗಬೇಕೆಂದುಕೊಂಡಿರುವ ರವಿ ಸುಬ್ರಮಣ್ಯ, ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಇವರ ಜೊತೆಗೆ ತೇಜಸ್ವಿನಿ ಅನಂತಕುಮಾರ್ ಹೆಸರು ಕೂಡ ಚಾಲ್ತಿಯಲ್ಲಿದೆ. ಹಾಗೆಯೇ ಕಾಂಗ್ರೆಸ್ಸಿನಿಂದ ಮತ್ತೆ ಹೊಸ ಅಭ್ಯರ್ಥಿ, ಕ್ಷೇತ್ರದ ನಾಡಿಮಿಡಿತ ಅರಿಯದ ಬ್ರಾಹ್ಮಣ ಕೋಮಿನ ಯುಬಿ ವೆಂಕಟೇಶ್ ಅವರನ್ನು ಅಭ್ಯರ್ಥಿ ಎಂದು ಸದ್ಯಕ್ಕೆ ಪಕ್ಷ ಮುಂದೆ ಮಾಡುತ್ತಿದೆ. ಇವರೊಂದಿಗೆ ಡಾ. ಶಂಕರ್ ಗುಹಾ ದ್ವಾರಕಾನಾಥ್ ಕೂಡ ರೇಸಿನಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಬ್ರಾಹ್ಮಣರನ್ನು ಕಣಕ್ಕಿಳಿಸುವ ಯತ್ನದಲ್ಲಿರುವುದರಿಂದ ಆಪ್ ಕೂಡ, ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಅಭ್ಯರ್ಥಿ ಎಂದು ಸಾರಿದೆ. ಆದರೆ ಅವರು ಆಗಲೇ ಖರೀದಿಗೊಳಪಟ್ಟು, ಬಿಜೆಪಿ ಸೇರಿಯಾಗಿದೆ.

ಸದ್ಯಕ್ಕೆ ಇವರೆಲ್ಲರಿಗಿಂತ ಭಿನ್ನವಾಗಿ ಕಾಣುತ್ತಿರುವುದು ಜಾತ್ಯತೀತ ಜನತಾದಳ ಮಾತ್ರ. ಬಸವನಗುಡಿ ಬ್ರಾಹ್ಮಣರ ಕ್ಷೇತ್ರವಲ್ಲ ಎಂದು ಬಲವಾಗಿ ನಂಬಿರುವ, ಇಲ್ಲಿಯವರೆಗೆ ಒಕ್ಕಲಿಗರನ್ನೇ ಅಭ್ಯರ್ಥಿ ಮಾಡಿರುವ ಜೆಡಿಎಸ್, ಈ ಬಾರಿಯೂ ಒಕ್ಕಲಿಗ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಮುಂದಾಗಿದೆ. ಎರಡು ಬಾರಿ ಸೋತಿರುವ ಬಾಗೇಗೌಡ ಈ ಬಾರಿಯೂ ಅಭ್ಯರ್ಥಿಯಾಗಲು ಸಿದ್ಧರಾಗಿದ್ದಾರೆ. ಆದರೆ ಕುಮಾರಸ್ವಾಮಿಯವರ ಬೆಂಬಲ ಅರಮನೆ ಪ್ರಕಾಶ್ ಎಂಬ ಹೊಸ ಹುಡುಗನಿಗಿದೆ. ಇವರಿಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾದರೆ, ಉಳಿದ ಪಕ್ಷಗಳ ಬ್ರಾಹ್ಮಣ ಅಭ್ಯರ್ಥಿಗಳ ಎದುರು ಒಬ್ಬ ಒಕ್ಕಲಿಗ ಹುರಿಯಾಳು ಸ್ಪರ್ಧಾಕಣದಲ್ಲಿ ಉಳಿಯುವುದು ಜೆಡಿಎಸ್ ಗೆ ಅನುಕೂಲಕರ ವಾತಾವರಣ ಸೃಷ್ಟಿಸಬಹುದು. ಹಾಗೆಯೇ ಬಿಜೆಪಿ, ಜೆಡಿಎಸ್ ಮತ್ತು ಆಪ್ ಗಳಿಗೆ ಭಿನ್ನವಾಗಿ ಕಾಂಗ್ರೆಸ್ ಪಕ್ಷವೇನಾದರೂ ಬೋವಿ ಜನಾಂಗದ ಕೆ ಚಂದ್ರಶೇಖರ್ ಗೆ ಟಿಕೆಟ್ ನೀಡಿದರೆ, ಪಕ್ಷ ಅವರ ಬೆನ್ನಿಗೆ ನಿಂತು ಬೆಂಬಲಿಸಿದರೆ, ಕಾಂಗ್ರೆಸ್ಸಿಗೂ ಒಂದು ಛಾನ್ಸಿದೆ ಎನ್ನುವ ಮಾತೂ ಕೇಳಿಬರುತ್ತಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X