- ನಾನು ಸಿಎಂ ಕುರ್ಚಿಯ ಆಕಾಂಕ್ಷಿ ಎಂದ ಸಿ ಟಿ ರವಿ
- ‘ಬಿಜೆಪಿ ಲಿಂಗಾಯತ ಸಿಎಂ’ ಪ್ರಸ್ತಾವನೆ ತಿರಸ್ಕರಿಸಿದ್ದೇಕೆ?’
ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿ ಪ್ರಸ್ತಾಪ ಚರ್ಚಿತವಾಗುತ್ತಿರುವ ನಡುವೆ, “ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮುಖ್ಯಮಂತ್ರಿಯಾಗಲಿ” ಎಂದು ಕೆ ಎಸ್ ಈಶ್ವರಪ್ಪ ಅಚ್ಚರಿ ಹೇಳಿಕೆ ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹೊತ್ತಲ್ಲೇ ಪಕ್ಷಗಳ ಗೆಲುವಿನ ಲೆಕ್ಕಾಚಾರದ ಜೊತೆಗೆ ಮುಖ್ಯಮಂತ್ರಿ ಸ್ಥಾನದ ಒಳ ಜಟಾಪಟಿ ಕಾವೇರಿದೆ. ಬಿಜೆಪಿಯ ಲಿಂಗಾಯತ ನಾಯಕರನ್ನು ‘ಸಂತೋಷ ಕೂಟ’ ಮುಗಿಸುತ್ತಿದೆ ಎನ್ನುವ ಆರೋಪಗಳು ವ್ಯಾಪಕವಾದ ಹೊತ್ತಲ್ಲೇ ಸಿ ಟಿ ರವಿ ಹೆಸರು ಮುನ್ನೆಲೆಗೆ ಬಂದಿದೆ.
ಸಿ ಟಿ ರವಿ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ, ಸಿ ಟಿ ರವಿ ಸ್ವತಃ “ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ” ಎಂದು ಹೇಳಿಕೊಂಡಿದ್ದರು.
ಇದಕ್ಕೂ ಮೊದಲು ಬಿಜೆಪಿ ಪಾಳಯದಲ್ಲಿ ಲಿಂಗಾಯತ ಮುಖ್ಯಮಂತ್ರಿ ಚರ್ಚೆ ಜೋರಾಗಿತ್ತು. ಸಮುದಾಯದ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ.
ಮತ್ತೊಂದೆಡೆ ಬಿ ಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಹಂಚಿಕೆ ಮಾಡುವ ಸಭೆಯಿಂದ ಯಡಿಯೂರಪ್ಪ ಅವರನ್ನು ಹೊರಗಿಡಲಾಗಿತ್ತು.
ಈ ಎಲ್ಲ ಬೆಳವಣಿಗೆಗಳಲ್ಲೂ ಕಾಂಗ್ರೆಸ್, ‘ಇದು ಲಿಂಗಾಯತ ನಾಯಕರನ್ನು ರಾಜಕೀಯವಾಗಿ ಮುಗಿಸುವ ಕುತಂತ್ರ. ಸಂತೋಷ ಕೂಟ ನಡೆಸುತ್ತಿರುವ ಪಿತೂರಿ’ ಎಂದು ಆರೋಪಿಸುತ್ತಾ ಬಂದಿತ್ತು.
ಈ ಸುದ್ದಿ ಓದಿದ್ದೀರಾ? ರಮೇಶ್ ಜಾರಕಿಹೊಳಿ ಹಣಿಯಲು ಪಕ್ಷ ಭೇದ ಮರೆತು ಒಂದಾದ ಲಿಂಗಾಯತ ನಾಯಕರು
ಈಗ ಕಾಂಗ್ರೆಸ್ ಆರೋಪಕ್ಕೆ ಬಲ ಬಂತಾಗಿದೆ. ಸಿ ಟಿ ರವಿ ಮುಖ್ಯಮಂತ್ರಿ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದು, ಈಶ್ವರಪ್ಪ ಅವರ ಬೆನ್ನಿಗೆ ನಿಂತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಪ್ರಲ್ಹಾದ್ ಜೋಶಿ, ಬಿ ಎಲ್ ಸಂತೋಷ್, ಸಿ ಟಿ ರವಿ ಅವರು ಸಿಎಂ ಹುದ್ದೆಗೆ ಕಣ್ಣಿಟ್ಟವರು” ಎಂದು ಹೇಳಿದೆ.
“ಈ ‘ಸಂತೋಷ ಕೂಟ’ ಬಿಜೆಪಿಯಲ್ಲಿನ ಲಿಂಗಾಯತ ನಾಯಕತ್ವವನ್ನು ಮುಗಿಸಿದ್ದರ ಕಾರಣವನ್ನು ಈಶ್ವರಪ್ಪ ಬಯಲು ಮಾಡಿದ್ದಾರೆ. ಸಂತೋಷ ಕೂಟದ ನಿಜ ಕನಸುಗಳು ಈಗ ಹೊರಬರುತ್ತಿದೆ!” ಎಂದು ವ್ಯಂಗ್ಯವಾಡಿದೆ.
ಬಿಜೆಪಿ ಗೆದ್ದರೆ ರಾಜ್ಯದಲ್ಲಿ ಮತ್ತೆ ಲಿಂಗಾಯತ ನಾಯಕರನ್ನು ಮುಖ್ಯಮಂತ್ರಿ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಸ್ತಾಪವನ್ನು ಅಲ್ಲಗಳೆದಿದ್ದರು.
“ಇದಕ್ಕಾಗಿಯೇ ‘ಲಿಂಗಾಯತ ಸಿಎಂ’ ಪ್ರಸ್ತಾವನೆಯನ್ನು ಅಮಿತ್ ಶಾ ತಿರಸ್ಕರಿಸಿದ್ದ ಬಿಜೆಪಿ?” ಎಂದು ಪ್ರಶ್ನಿಸಿದೆ.