- ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ಮತದಾನದಿಂದ ವಂಚಿತ
- ‘ಜನವರಿಯಲ್ಲಿ ನನ್ನ ಹೆಸರು ಮತದಾರರ ಪಟ್ಟಿಯಲ್ಲಿತ್ತು’
ಮತದಾನಕ್ಕಾಗಿಯೇ ದೂರದ ಅಮೇರಿಕಾದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ದಾವಣಗೆರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣಕ್ಕೆ ಮತದಾನದಿಂದ ವಂಚಿತರಾಗಿದ್ದಾರೆ.
ಅಮೆರಿಕಾದಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಆಗಿರುವ ರಾಘವೇಂದ್ರ ಕಮಾಲಕರ್ ಮತದಾನದಿಂದ ವಂಚಿತರಾದವರು. ಅವರು ಅಮೆರಿಕಾದಿಂದ ದಾವಣಗೆರೆಗೆ ಬಂದಿದ್ದರು. ಆದರೆ, ಅವರ ಹೆಸರೇ ಮತದಾನದ ಪಟ್ಟಿಯಲ್ಲಿ ಇರಲಿಲ್ಲ. ಹೀಗಾಗಿ ಮತದಾನ ಮಾಡಲು ಸಾಧ್ಯವಾಗಲಿಲ್ಲ.
“ಜನವರಿಯಲ್ಲಿ ನನ್ನ ಹೆಸರು ಮತದಾರರ ಪಟ್ಟಿಯಲ್ಲಿತ್ತು. ನನಗೆ ಮಾಹಿತಿಯೂ ಬಂದಿತ್ತು. ವಿದ್ಯಾನಗರದ ಮಾಗನೂರು ಬಸಪ್ಪ ಶಾಲೆಯಲ್ಲಿ ನಾನು ಮತ ಚಲಾಯಿಸಲು ಬಂದಾಗ ಪಟ್ಟಿಯಲ್ಲಿ ನನ್ನ ಹೆಸರೇ ಇಲ್ಲ. ಮತದಾನ ಮಾಡಲು ಆಗಲೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ನಾನು ಮತದಾನ ಮಾಡುವ ಸಲುವಾಗಿಯೇ ಅಮೇರಿಕಾದಿಂದ ಸುಮಾರು ಒಂದೂವರೆ ಲಕ್ಷ ರೂ. ಖರ್ಚು ಮಾಡಿಕೊಂಡು ಬಂದಿದ್ದೇನೆ. ಆದರೆ, ನನಗೆ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಮತದಾನ ಪ್ರತಿಯೊಬ್ಬರ ಜವಾಬ್ದಾರಿ. ಅದನ್ನರಿತು ಮತ ಚಲಾಯಿಸಲು ಬಂದಿದ್ದೆ. ಆದರೆ, ಮತಹಾಕಲು ಸಾಧ್ಯವಾಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿರುಸುಗೊಂಡ ಮತದಾನ: ರಾಜ್ಯಾದ್ಯಂತ ಮಧ್ಯಾಹ್ನ ವೇಳೆಗೆ 37%ರಷ್ಟು ಮತದಾನ