- ಮಾಜಿ ಶಾಸಕರಿಗೂ ಪಕ್ಷದಿಂದ ಕೋಕ್
- ಕೆಪಿಸಿಸಿ ಶಿಸ್ತು ಪಾಲನ ಸಮಿತಿಯಿಂದ ಆದೇಶ
ರಾಜ್ಯ ವಿಧಾನಸಭಾ ಚುನಾವಣೆ ಅಖಾಡ ರಂಗೇರಿದ್ದು, ಕಾಂಗ್ರೆಸ್‌ನ 24 ಬಂಡಾಯ ಅಭ್ಯರ್ಥಿಗಳನ್ನು ಪಕ್ಷ ಉಚ್ಚಾಟಿಸಿದೆ.
ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಕೆಲ ನಾಯಕರು ಪಕ್ಷೇತರವಾಗಿ ಅಖಾಡಕ್ಕೆ ಧುಮುಕಿದ್ದರು. ಅವರ ವಿರುದ್ಧ ಈಗ ಕೆಪಿಸಿಸಿ ಶಿಸ್ತು ಪಾಲನ ಸಮಿತಿ ಕ್ರಮ ಕೈಗೊಂಡಿದೆ.
ಶಿರಹಟ್ಟಿಯಿಂದ ಬಂಡಾಯ ಸಾರಿರುವ ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಬಿ ಬಿ ರಾಮಸ್ವಾಮಿಗೌಡ (ಕುಣಿಗಲ್) ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇವರಷ್ಟೇ ಅಲ್ಲದೆ, ಇನ್ಯಾರಾದರು ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪಕ್ಷೇತರರಾಗಿ(ಬಂಡಾಯ) ಸ್ಪರ್ಧಿಸಿದ್ದರೆ ಅವರಿಗೂ ಈ ಉಚ್ಚಾಟನೆ ಆದೇಶ ಅನ್ವಯಿಸಲಿದೆ.
24 ಅಭ್ಯರ್ಥಿಗಳ ಜೊತೆ ಪ್ರಚಾರದಲ್ಲಿ ಭಾಗವಹಿಸಿದರೆ ಅಂಥವರ ವಿರುದ್ಧವೂ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷ ಕೆ ರೆಹಮಾನ್ ಖಾನ್ ಅವರು ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಭಾರಿ ಕಚೇರಿಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಅನಿವಾಸಿ ಕನ್ನಡಿಗರ ಒತ್ತಾಯ
ಉಚ್ಚಾಟನೆಗೊಂಡ ಇತರರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಪಿ ಲತಾ ಮಲ್ಲಿಕಾರ್ಜುನ (ಹರಪನಹಳ್ಳಿ), ಕಾಂಗ್ರೆಸ್ ನಾಯಕ ಕೃಷ್ಣೇಗೌಡ (ಅರಕಲಗೂಡು), ಕೆಪಿಸಿಸಿ ಸಂಯೋಜಕ ಚಂದ್ರಾ ಸಿಂಗ್ (ಬೀದರ್ ದಕ್ಷಿಣ), ಚಿಕ್ಕಮಗಳೂರು ಡಿಸಿಸಿ ಉಪಾಧ್ಯಕ್ಷ ಗೋಪಿಕೃಷ್ಣ (ತರೀಕೆರೆ), ಬೆಳಗಾವಿ ಯುವ ಕಾಂಗ್ರೆಸ್ ಮುಖಂಡ ಇರ್ಫಾನ್ ತಾಳಿಕೋಟೆ (ಖಾನಾಪುರ), ಕಿಸಾನ್ ಸೆಲ್ ಉಪಾಧ್ಯಕ್ಷ ಪದ್ಮಜಿತ್ ನಾಡಗೌಡ (ತೇರದಾಳ), ಬಸವರಾಜ್ ಮಲ್ಕಾರಿ (ಹುಬ್ಬಳ್ಳಿ-ಧಾರವಾಡ ಪಶ್ಚಿಮ), ಉಮಾದೇವಿ (ನೆಲಮಂಗಲ), ಯೂಸುಫ್ ಅಲಿ ಜಾಮದಾರ್ (ಬೀದರ್ ದಕ್ಷಿಣ), ನಾರಾಯಣ ಬಂಗಿ (ಬೀದರ್ ದಕ್ಷಿಣ), ವಿಜಯಕುಮಾರ್ ಬರೂರು (ಬೀದರ್ ದಕ್ಷಿಣ), ಸವಿತಾ ಮಲ್ಲೇಶ್ ನಾಯಕ್ (ಮಾಯಕೊಂಡ), ಪಿ.ಎಚ್. ಚಂದ್ರಶೇಖರ್ (ಶ್ರೀರಂಗಪಟ್ಟಣ), ಪುಟ್ಟ ಆಂಜನಪ್ಪ (ಶಿಡ್ಲಘಟ್ಟ), ಶಂಭು ಕೋಲ್ಕರ್ (ರಾಯಬಾಗ್), ಬಿ.ಎಚ್. ಭೀಮಪ್ಪ (ಶಿವಮೊಗ್ಗ ಗ್ರಾಮಾಂತರ), ಎಸ್.ಪಿ. ನಾಗರಾಜಗೌಡ (ಶಿಕಾರಿಪುರ), ದೋರ್ನಲ್ ಪರಮೇಶ್ವರಪ್ಪ (ತರೀಕೆರೆ), ಶಶಿ ಚೌಧಿ (ಬೀದರ್), ಲಕ್ಷ್ಮಣ ಸೊರಳಿ (ಔರಾದ್), ಮುಜೀಬುದ್ದೀನ್ (ರಾಯಚೂರು ನಗರ).