- ಕಾಂಗ್ರೆಸ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ತೇಜಸ್ವಿ ಸೂರ್ಯ
- ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದ ವಕ್ತಾರ ರಮೇಶ್ ಬಾಬು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಭಯೋತ್ಪಾದನಾ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿಕೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪತ್ರ ಬರೆದಿದೆ.
ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಪತ್ರ ಬರೆದಿದ್ದಾರೆ. ತೇಜಸ್ವಿ ಸೂರ್ಯ ಮತ್ತು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯ ಮಾತನಾಡಿರುವ ವಿಡಿಯೋ ಮತ್ತು ಪತ್ರಿಕಾ ವರದಿಗಳನ್ನು ಲಗತ್ತಿಸಿ ದೂರು ನೀಡಿದ್ದಾರೆ.
ಮೇ 3ರಂದು ತೇಜಸ್ವಿ ಸೂರ್ಯ ಮತ್ತು ಗೌರವ್ ಭಾಟಿಯ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಆಗ, “ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗೂಂಡಾ ರಾಜ್ಯ, ಮಾಫಿಯಾ ರಾಜ್ಯ, ಇಸ್ಲಾಮೀಕರಣ ಹಾಗೂ ಭಯೋತ್ಪಾದನಾ ಪರಿಸ್ಥಿತಿ ನಿರ್ಮಾಣವಾಗುತ್ತದೆ” ಎಂದು ಹೇಳಿಕೆ ನೀಡಿದ್ದರು.
ತೇಜಸ್ವಿ ಸೂರ್ಯ ಅವರ ಹೇಳಿಕೆ ಉಲ್ಲೇಖಿಸಿರುವ ರಮೇಶ್ ಬಾಬು, “ಚುನಾವಣಾ ಆಯೋಗ ಪಾರದರ್ಶಕ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯ ಮತ್ತು ಗೌರವ್ ಭಾಟಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು” ಎಂದು ಕೆಪಿಸಿಸಿ ಪರವಾಗಿ ಮನವಿ ಮಾಡಿದ್ದಾರೆ.
“ನಮ್ಮ ಪಕ್ಷದ ವಿರುದ್ಧ ಸುಳ್ಳು ಮತ್ತು ದ್ವೇಷಪೂರಿತ ಆರೋಪವನ್ನು ಮಾಡಿರುತ್ತಾರೆ. ಕಾಂಗ್ರೆಸ್ ಪಕ್ಷದ ಮೇಲೆ ಇವರು ಮಾಡಿರುವ ಗುರುತರವಾದ ಮತ್ತು ದ್ವೇಷಪೂರಿತವಾದ ಆರೋಪವು ರಾಜಕೀಯ ಪ್ರೇರಿತವಾಗಿದ್ದು, ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ನಾಯಕರನ್ನು ತೇಜೋವಧೆ ಮಾಡುವ ದುರುದ್ದೇಶದಿಂದ ಕೂಡಿದೆ” ಎಂದು ಹೇಳಿದ್ದಾರೆ.
“ಬಿಜೆಪಿ ನಾಯಕರ ಹೇಳಿಕೆ ಮಾದರಿ ನೀತಿಸಂಹಿತೆಗೆ ವಿರುದ್ಧವಾಗಿದೆ. ಮತದಾರರಲ್ಲಿ ಮತ್ತು ಜನಸಾಮಾನ್ಯರಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರಚೋದನೆ ಮಾಡುವ ದುರುದ್ದೇಶದಿಂದ ಕೂಡಿದೆ. ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ತಪ್ಪು ಮಾಹಿತಿ ನೀಡುವ ಒಳಸಂಚಿನ ಭಾಗವಾಗಿದೆ” ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶೋಭಾ ಕರಂದ್ಲಾಜೆ ಸೀತಾಮಾತೆ ಆಗಲಿ, ಶೂರ್ಪನಕಿ ಪಾತ್ರ ಬೇಡ: ರಮೇಶ್ ಬಾಬು
“ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣದ ಸಂಸದ. ಅವರು ಮಾತನಾಡುವ ವೇಳೆ ಎಚ್ಚರದಿಂದ ಮತ್ತು ಜವಾಬ್ದಾರಿಯುತವಾಗಿ ಮಾತನಾಡಬೇಕು. ಆದರೆ, ಕಾಂಗ್ರೆಸ್ ಪ್ರಣಾಳಿಕೆ ಗುರಿಯಾಗಿಸಿಕೊಂಡಿರುವ ಅವರು ಪಕ್ಷದ ವಿರುದ್ಧ ಪ್ರಚೋದಿಸಿದ್ದಾರೆ” ಎಂದು ರಮೇಶ್ ಬಾಬು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ತೇಜಸ್ವಿ ಸೂರ್ಯ ಮತ್ತು ಗೌರವ್ ಭಾಟಿಯಾ ಧರ್ಮಾಧಾರಿತವಾಗಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂಬ ದುರುದ್ದೇಶಪೂರಿತ ಆರೋಪ ಮಾಡಿ ಕಾಂಗ್ರೆಸ್ ಪಕ್ಷ ಧರ್ಮ ವಿರೋಧಿ ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ” ಎಂದಿದ್ದಾರೆ.
“ಬಿಜೆಪಿ ನಾಯಕರ ಹೇಳಿಕೆ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿಗೆ ವಿರುದ್ಧವಾಗಿದ್ದು, ಕಾಂಗ್ರೆಸ್ ಪಕ್ಷವನ್ನು ತೇಜೋವಧೆ ಮಾಡುವ ಮತ್ತು ಕಾಂಗ್ರೆಸ್ ಪಕ್ಷದ ಹೆಸರಿಗೆ ಮಸಿ ಬಳಿಯುವ ವ್ಯವಸ್ಥಿತ ಸಂಚಾಗಿರುತ್ತದೆ” ಎಂದು ಹೇಳಿದ್ದಾರೆ.