ರಾಜ್ಯದಲ್ಲಿ ಎರಡನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಹೇಯ ಕೃತ್ಯ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ವರದಿಯಾಗಿದೆ. ಹಾಗೆಯೇ ಹಾಸನ ಜಿಲ್ಲೆಯ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಾನ್ವಿಯಲ್ಲಿ ಪ್ರಕರಣ ಸಂಬಂಧ ಅತ್ಯಾಚಾರ ಆರೋಪಿ ಶಿವನಗೌಡ ಹಾಗೂ ಖಾಸಗಿ ಶಾಲೆಯ ವ್ಯವಸ್ಥಾಪಕ ರಾಜು ತಾಳಿಕೋಟೆಯನ್ನು ಮಾನ್ವಿ ಪೊಲೀಸರು ವಶಕ್ಕೆ ಪಡೆದಿದ್ದು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಲೆಯಿಂದ ಮನೆಗೆ ಕರೆದೊಯ್ಯುವ ನೆಪಮಾಡಿ ಆರೋಪಿ ಶಿವನಗೌಡ ಬಾಲಕಿಯನ್ನು ಶಾಲೆಯಿಂದ ಕರೆದುಕೊಂಡು ಹೋಗಿದ್ದ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸದ್ಯ ಸಂತ್ರಸ್ತೆ ಬಾಲಕಿಯನ್ನು ಮಾನ್ವಿ ತಾಲೂಕು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಪೋಷಕರ ಅನುಮತಿಯಿಲ್ಲದೆ ಅಪರಿಚಿತರೊಂದಿಗೆ ಮಗುವನ್ನು ಕಳುಹಿಸಿದ ಶಾಲಾ ಸಿಬ್ಬಂದಿ ವಿರುದ್ಧ ಸಂತ್ರಸ್ತೆ ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅತ್ಯಾಚಾರ ಎಸಗಿದಾತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಬೇರೆ ಯಾವ ಮಕ್ಕಳಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಂಭಮೇಳದ ಕಾಲ್ತುಳಿತದಲ್ಲಿ ಗತಿಸಿದವರ ಮನೆಗಳಿಗೇಕೆ ಧಾವಿಸಲಿಲ್ಲ ಬಿಜೆಪಿ ಹಿಂಡು?
ಅಪ್ರಾಪ್ತ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ
ಹಾಸನ ಜಿಲ್ಲೆಯ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಎರಡು ಮಕ್ಕಳ ತಂದೆ, ಅಪ್ರಾಪ್ತ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಬಾಲಕಿಯ ಪಕ್ಕದ ಮನೆಯ ನಿವಾಸಿಯಿಂದಲೇ ಈ ಹೀನಕೃತ್ಯ ನಡೆದಿದೆ. ಮಂಗಳವಾರ ಬಾಲಕಿಯ ಮನೆಯವರು ಸಂಬಂಧಿಕರೊಬ್ಬರ ಬೀಗರ ಔತಣ ಕಾರ್ಯಕ್ರಮಕ್ಕೆ ಹೋಗಿದ್ದರು. ಬಾಲಕಿ ಒಬ್ಬಳೇ ಮನೆಯಲ್ಲಿದ್ದಳು. ಇದೇ ಸಮಯಕ್ಕಾಗಿ ಕಾದಿದ್ದ ಆರೋಪಿ, ಚಾಕೊಲೆಟ್ ಕೊಡುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಸಂಜೆ ವೇಳೆಗೆ ಪೋಷಕರು ಬಂದಾಗ ಬಾಲಕಿಯ ವರ್ತನೆ ಬದಲಾಗಿತ್ತು. ಒಂದೇ ಸಮನೆ ಅಳಲಾರಂಭಿಸಿದ್ದಾಳೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ತೋರಿಸಿದಾಗ ಅತ್ಯಾಚಾರ ನಡೆದಿದೆ ಎಂಬುದು ದೃಢವಾಗಿದೆ.
ಕರ್ನಾಟಕದ ಜನರ ಮನಸ್ಥಿತಿಯೂ ಉತ್ತರ ಭಾರತದ ರಾಜ್ಯಗಳಂತೆ ಆಗುತ್ತಿರುವುದು ದುರಂತ