ಅಣ್ಣ- ತಮ್ಮನ ವೈಮನಸ್ಸು ಎರಡು ಮಕ್ಕಳು ಮತ್ತು ಅಣ್ಣನ ಹೆಂಡತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದ್ದು, ಕೊಲೆ ಮಾಡಿದ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಯಳ್ಳೂರ ಗ್ರಾಮದ ಕುಮಾರ ಚನ್ನಬಸನಗೌಡ ಮರಿಗೌಡರ (35) ತನ್ನ ಅಣ್ಣನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ. 32 ವರ್ಷದ ಗೀತಾ, ಹತ್ತು ವರ್ಷದ ಅಕುಲ್ ಗೌಡ, ಹಾಗೂ ಆರು ವರ್ಷದ ಅಂಕಿತಾ ಹತ್ಯೆಯಾದವರು.
ಚನ್ನಬಸವನಗೌಡ ಮರಿಗೌಡರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಅತ್ತಿಗೆ ಗೀತಾ ಮತ್ತು ಮಕ್ಕಳಾದ ಅಕುಲ್ ಗೌಡ, ಅಂಕಿತಾ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಮನೆಯಲ್ಲೇ ಮಲಗಿದ್ದ ಹೊನ್ನೇಗೌಡನ ತಾಯಿ ಘಟನೆಯನ್ನು ಕಂಡು ಕಿರುಚಾಡಿದಾಗ ಗ್ರಾಮಸ್ಥರು ಸೇರಿಕೊಂಡಿದ್ದಾರೆ. ಅಕುಲ್‌ಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗೀತಾ ಮತ್ತು ಅಂಕಿತಾಳನ್ನು ಹಾನಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಹೊನ್ನೇಗೌಡ ಮರಿಗೌಡರ ಕಳೆದ 15 ವರ್ಷಗಳಿಂದ ದುಬೈನಲ್ಲಿ ಮೆಕಾನಿಕ್ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಸ್ವಂತ ಗ್ರಾಮವಾದ ಯಳ್ಳೂರಿನಲ್ಲಿ ವಾಸವಾಗಿದ್ದರು. ಇವರೊಂದಿಗೆ ಹೊನ್ನಗೌಡನ ತಮ್ಮ ಕುಮಾರ ಮತ್ತು ತಾಯಿ ಕಮಲವ್ವ ವಾಸವಿದ್ದರು. 20 ದಿನಗಳ ಹಿಂದೆ ಹೊನ್ನಗೌಡ ದುಬೈನಿಂದ ಗ್ರಾಮಕ್ಕೆ ಬಂದಿದ್ದರು. ಆ ಸಮಯದಲ್ಲಿ ಅಣ್ಣ-ತಮ್ಮನ ನಡುವೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ವೈಮನಸ್ಸು ಉಂಟಾಗಿತ್ತು. ನವೆಂಬರ್ ಒಂದರಂದು ಹೊನ್ನೇಗೌಡ ದುಬೈಗೆ ಮರಳಿದ್ದರು.
ಹಾನಗಲ್ಲಿನಲ್ಲಿ ಅಣ್ಣ ಹೊನ್ನೇಗೌಡರ ವ್ಯವಹಾರವನ್ನು ಸಹೋದರ ಕುಮಾರ ನೋಡಿಕೊಳ್ಳುತ್ತಿದ್ದ. ಆದರೆ, ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದ ಅಣ್ಣ ಹೊನ್ನೇಗೌಡ, ಇನ್ಮುಂದೆ ವ್ಯವಹಾರವನ್ನು ತನ್ನ ಪತ್ನಿ ಗೀತಾ ಹೆಸರಲ್ಲಿ ನಡೆಸುವಂತೆ ತಮ್ಮನಿಗೆ ತಿಳಿಸಿದ್ದ. ವಹಿವಾಟು ತಮ್ಮನ ಬದಲು ಪತ್ನಿ ಹೆಸರಲ್ಲಿ ನಡೆಸು ಎಂದು ಹೇಳಿದ್ದಕ್ಕೆ ಬೇಸತ್ತ ಕುಮಾರಗೌಡ ಅಣ್ಣನ ಪತ್ನಿ ಮತ್ತು ಮಕ್ಕಳನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ್ ಗುಣಾರೆ, ಹೆಚ್ಚುವರಿ ಎಸ್‌ಪಿ ಸಿ.ಗೋಪಾಲ್, ಡಿವೈಎಸ್‌ಪಿ ಆರ್.ಮಂಜುನಾಥ್, ಹಾನಗಲ್ ಠಾಣೆ ಸಿಪಿಐ ಶ್ರೀಧರ್ ಎಸ್.ಆರ್, ಸಿಎಸ್‌ಐ ಯಲ್ಲಪ್ಪ ಹಿತಗಣ್ಣನವರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.