- ರಾಜ್ಯ ಸರ್ಕಾರ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯ
- ವಿವಿಧ ಸಂಘಟನೆಗಳ ಒಕ್ಕೂಟದಿಂದ ʼಕರ್ನಾಟಕ ಬಂದ್ʼ ಗೆ ಬೆಂಬಲಿಸಿ ಹಕ್ಕೊತ್ತಾಯ ಪತ್ರ ಸಲ್ಲಿಕೆ
ರಾಜ್ಯದಲ್ಲಿ ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇರುವ ಅಲ್ಪ ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಟ್ಟರೆ ಕಾವೇರಿ ನೀರನ್ನೇ ಅವಲಂಬಿತ ರೈತರು ಹಾಗೂ ಆ ಭಾಗದ ಜನರಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತದೆ. ರಾಜ್ಯ ಸರ್ಕಾರ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಒಕ್ಕೂಟ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್), ಭೂಮಿಪುತ್ರ ರೈತ ಸಂಘ, ಅಲೆಮಾರಿ ಬುಡಕಟ್ಟು ಮಹಾಸಭಾ ಹಾಗೂ ಕರ್ನಾಟಕ ಮಾದಿಗರ ಸಂಘಗಳ ಒಕ್ಕೂಟದಿಂದ ʼಕರ್ನಾಟಕ ಬಂದ್ʼ ಗೆ ಬೆಂಬಲಿಸಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರ್ ಜಿ.ಎಸ್. ಶಂಕರ ಅವರಿಗೆ ಸಲ್ಲಿಸಿದರು.
“ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಕಾವೇರಿ ವಿಚಾರವಾಗಿ ಮಧ್ಯ ಪ್ರವೇಶಿಸಿ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಬೇಕು. ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು. ನಿಲ್ಲಿಸದಿದ್ದರೆ ಹೋರಾಟ ಇನ್ನಷ್ಟು ತೀವ್ರವಾಗುತ್ತದೆ ಎಂದು ಎಚ್ಚರಿಸಿದ ಪ್ರತಿಭಟನಾಕಾರರು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಕರೆಗೆ ನಮ್ಮ ಜಿಲ್ಲಾ ಸಂಘಟನೆಗಳ ಸಂಪೂರ್ಣ ಬೆಂಬಲವಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಾವೇರಿ ವಿವಾದ | ಕಲಾವಿದರನ್ನು ಹಿಂಸಿಸುವುದು ತಪ್ಪು; ಬಹುಭಾಷಾ ನಟ ಪ್ರಕಾಶ್ ರಾಜ್
ಈ ಸಂದರ್ಭದಲ್ಲಿ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಭೂಮಿಪುತ್ರ ರೈತ ಸಂಘ ಅಧ್ಯಕ್ಷ ಫಕ್ಕೀರಗೌಡ ಗಾಜೀಗೌಡ್ರ, ಅಲೆಮಾರಿ ಸಂಘದ ಅಧ್ಯಕ್ಷ ವಿಭೂತಿ ಶೆಟ್ಟಿ, ಧಾರವಾಡ ಜಿಲ್ಲಾ ಕರ್ನಾಟಕ ರಾಜ್ಯ ಮಾದಿಗರ ಸಂಘದ ಅಧ್ಯಕ್ಷ ದುರ್ಗಪ್ಪ ಮಾದರ, ಆನಂದ ಕುಮಾರಿ, ರಾಜು ಕುಮಾರಿ ಸೇರಿದಂತೆ ಅನೇಕರು ಇದ್ದರು.