ರಾಜ್ಯ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಪಕ್ಷಾಂತರ ಅಬ್ಬರ ಜೋರಾಗಿಯೇ ನಡೆದಿದೆ. ಅಲ್ಲದೆ, ಕೆಲವೆಡೆ ಜಿದ್ದಿನ ಸ್ಪರ್ಧೆಯೂ ನಡೆದಿದೆ. ಅಂತೆಯೇ, ಹೊಳೆನರಸೀಪುರ ಕ್ಷೇತ್ರದಲ್ಲಿ ಮಾಜಿ ಸಚಿವ ರೇವಣ್ಣ ವಿರುದ್ಧ ಕಣಕ್ಕಿಳಿಯುತ್ತೇನೆಂದು ಹಾಸನ ಕ್ಷೇತ್ರದ ಶಾಸಕ, ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಹೇಳಿದ್ದರು. ಅವರು ಹೊಳೆನರಸೀಪುರದಲ್ಲೂ ನಾಮಪತ್ರ ಸಲ್ಲಿಸುತ್ತಾರೆ ಎನ್ನಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಪ್ರೀತಂ ಗೌಡ ಹೊಳೆನರಸೀಪುರದತ್ತ ಮುಖ ಮಾಡದೇ, ಹಾಸನದಲ್ಲಿಯೇ ಉಳಿದಿದ್ದಾರೆ.
ಕನಕಪುರ ಹಾಗೂ ವರುಣಾ ಕ್ಷೇತ್ರಗಳಲ್ಲಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ್ ಹಾಗೂ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸುವ ಮೂಲಕ ಪ್ರಯೋಗಿಸಿದ್ದ ಅಸ್ತ್ರವನ್ನೇ ಹೊಳೆನರಸೀಪುರದಲ್ಲಿ ರೇವಣ್ಣ ವಿರುದ್ಧ ಪ್ರಯೋಗಿಸಲು ಬಿಜೆಪಿ ಮುಂದಾಗಿತ್ತು. ಅದರಂತೆ, ಪ್ರೀತಂ ಗೌಡರನ್ನು ಕಣಕ್ಕಿಸುತ್ತದೆ ಎನ್ನಲಾಗಿತ್ತು. ಪ್ರೀತಂ ಗೌಡ ಕೂಡ ಹೊಳೆನರಸೀಪುರದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದರು. ಆದರೆ, ನಾಮಪತ್ರ ಸಲ್ಲಿಕೆಯ ಸಮಯ ಮುಗಿದಿದ್ದರೂ, ಅವರು ಹೊಳೆನರಸೀಪುರದತ್ತ ಸುಳಿದಿಲ್ಲ.
ಈಗಾಗಲೇ ಬಿಜೆಪಿ ಮೊದಲ ಪಟ್ಟಿಯಲ್ಲಿ ಹೊಳೆನರಸೀಪುರ ಕ್ಷೇತ್ರಕ್ಕೆ ದೇವರಾಜೇಗೌಡ ಅವರ ಹೆಸರನ್ನು ಪ್ರಕಟಿಸಿತ್ತು. ಪ್ರೀತಂ ಗೌಡ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಂದು ತಿಳಿದುಬಂದ ಬಳಿಕ ಪ್ರತಿಕ್ರಿಯೆ ನೀಡಿದ್ದ ದೇವರಾಜೇಗೌಡ, “ಪ್ರೀತಂಗೌಡ ಸ್ಪರ್ಧೆ ಸಂಬಂಧ ಪಕ್ಷದ ವರಿಷ್ಠರು ಏನು ಹೇಳುತ್ತಾರೋ ಅದರಂತೆ ಕೇಳುವೆ” ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ಶ್ರವಣಬೆಳಗೊಳ | ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಸಿದ್ಧಾಂತಕ್ಕೆ ಬಿಎಸ್‌ಪಿ ಬದ್ಧ: ಕುಂದೂರು ರಾಜು
“ನಾನು ಪ್ರಚಾರದಲ್ಲಿದ್ದಾಗ ಹೈ ಕಮಾಂಡ್ ನನಗೆ ಸೂಚನೆ ಕೊಟ್ಟಿದೆ. ಪ್ರೀತಂಗೌಡ ಅವರು ಹೊಳೆನರಸೀಪುರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಸುದ್ದಿಯನ್ನೂ ಮಾಧ್ಯಮಗಳಲ್ಲಿ ನೋಡಿದೆ. ಹಾಗಾಗಿ ಅವರು ಹೊಳೆನರಸೀಪುರಕ್ಕೆ ಬಂದರೆ ನಾನೇ ಸ್ವಾಗತ ಮಾಡುತ್ತೇನೆ. ಕೌರವರನ್ನು ನಾಶ ಮಾಡಲು ಕೃಷ್ಣ ಬಂದಂತೆ, ಕ್ಷೇತ್ರಕ್ಕೆ ಪ್ರೀತಂ ಗೌಡ ಬಂದರೆ ನಾನು ಸಾರಥಿ ಆಗುತ್ತೇನೆ” ಎಂದು ಹೇಳಿದ್ದರು.
ಸದ್ಯ ಪ್ರೀತಂ ಗೌಡ ಅತ್ತ ಸುಳಿಯದ ಕಾರಣ, ದೇವರಾಜೇಗೌಡ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.