- ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ
- ಹೊಸದಾಗಿ ಅಭಿವೃದ್ಧಿ ಪಡಿಸಿದ ಇವಿಎಂ, ವಿವಿ ಪ್ಯಾಟ್ ಬಳಕೆ
ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನದ ಹಬ್ಬಕ್ಕೆ ರಾಜ್ಯ ಸಿದ್ಧವಾಗಿದೆ. ರಾಜಕೀಯ ಭವಿಷ್ಯ ಬರೆಯಲು ಮತದಾರರು ಉತ್ಸುಕರಾಗಿದ್ದಾರೆ.
ಮತ ಚಲಾಯಿಸಲು ಬಳಸುವ ಇವಿಎಂ(ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್)ಗಳನ್ನು ಚುನಾವಣೆ ಆಯೋಗ ಸಜ್ಜುಗೊಳಿಸಿದ್ದು, ಮತಗಟ್ಟೆಗಳಿಗೆ ರವಾನೆ ಮಾಡಲಾಗುತ್ತಿದೆ. ಈ ಇವಿಎಂ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಇಲ್ಲಿ ನೋಡೋಣ…
ಇವಿಎಂ ಒಂದು ವಿದ್ಯುನ್ಮಾನ ಯಂತ್ರ. ಇವಿಎಂ ಬಳಕೆಗೂ ಮುನ್ನ ಬ್ಯಾಲೇಟ್ ಪೇಪರ್ ಮೂಲಕ ಮತದಾನ ನಡೆಯುತ್ತಿತು. ಆದರೆ, ಬ್ಯಾಲೆಟ್ ಪೇಪರ್ ಮತದಾನದ ವೇಳೆ ಸಾಕಷ್ಟು ಮತಗಳು ಅಮಾನ್ಯವಾಗುತ್ತಿದ್ದವು. ಸರಿಯಾದ ರೀತಿಯಲ್ಲಿ ಗುರುತು ಹಾಕದೆ ಇರುವುದು ಸೇರಿದಂತೆ ಹಲವು ಸಮಸ್ಯೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಬ್ಯಾಲೆಟ್ ಮತದಾನದ ಪ್ರಕ್ರಿಯೆ ಸ್ಥಗಿತಗೊಳಿಸಿ ಇವಿಎಂ ಮೂಲಕ ಮತದಾನ ವ್ಯವಸ್ಥೆ ಜಾರಿಗೆ ಬಂದಿದೆ.
ಚುನಾವಣಾ ಆಯೋಗದ ತಾಂತ್ರಿಕ ತಜ್ಞರ ಸಮಿತಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಾದ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಹೈದರಾಬಾದ್‌ನ ಎಲೆಕ್ಟ್ರಾನಿಕ ಕಾರ್ಪೊರೇಷನ್ ಆಫ್ ಇಂಡಿಯಾ ಎರಡೂ ಸಂಸ್ಥೆಗಳು 1980-90ರಲ್ಲಿ ಮೊದಲ ಬಾರಿಗೆ ಇವಿಎಂಗಳ ಅಭಿವೃದ್ಧಿ ಪಡಿಸಿವೆ. 1979ರಲ್ಲೇ ಇಂಥ ಮೊದಲ ಪ್ರಯೋಗ ಮಾದರಿಯನ್ನು ಸಿದ್ಧಗೊಳಿಸಲಾಯಿತು.
ಅನಂತರ ಬೆಂಗಳೂರಿನ ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ (BEL) ಕೂಡ ಈ ಯಂತ್ರದ ತಯಾರಿಯಲ್ಲಿ ಭಾಗಿಯಾಯಿತು. 1982ರಲ್ಲಿ ಕೇರಳದಲ್ಲಿ ಮತ್ತು 1998ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಇಂಥ ಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಿ ನೋಡಲಾಯಿತು. ಅದಾದ ಮೇಲೆ ಗೋವಾದಲ್ಲಿ ಸಾಕ್ಷರತೆ ಹೆಚ್ಚಿದ್ದರಿಂದ ಮತ್ತು ಅಲ್ಲಿ ಅಂತ ಗಲಾಟೆಯೇನೂ ಇಲ್ಲದ್ದರಿಂದ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯೋಗ ಮಾಡಿ ನೋಡಲಾಯಿತು.
ಇವಿಎಂಗಳನ್ನು ಹ್ಯಾಕ್ ಮಾಡಿ ಒಂದೇ ಪಕ್ಷಕ್ಕೆ ಹೆಚ್ಚಿನ ಮತಗಳು ಹೋಗುವ ಹಾಗೇ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಸಾಕಷ್ಟು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ನೂತನ ಇವಿಎಂಗಳ ಬಳಕೆಯಾಗಬೇಕು ಎಂದು ಚುನಾವಣೆ ಆಯೋಗವನ್ನು ಕೋರಿತ್ತು.
ಹೀಗಾಗಿ ಈ ಚುನಾವಣೆಯಲ್ಲಿ ಈ ಬಾರಿ ನೂತನ ಇವಿಎಂಗಳ ಬಳಕೆಯಾಗುತ್ತಿದೆ. ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಹೈದರಾಬಾದ್‌ನ ಎಲೆಕ್ಟ್ರಾನಿಕ ಕಾರ್ಪೊರೇಷನ್ ಆಫ್ ಇಂಡಿಯಾ ಎರಡು ಸರ್ಕಾರಿ ಸಂಸ್ಥೆಗಳು ಈ ಇವಿಎಂಗಳನ್ನು ಅಭಿವೃದ್ಧಿ ಮತ್ತು ವಿನ್ಯಾಸ ಮಾಡಿವೆ. ಈ ಇವಿಎಂಗಳು ಬ್ಯಾಟರಿ ಚಾಲಿತ ಯಂತ್ರಗಳಾಗಿದ್ದು, ಇವುಗಳಿಗೆ ವಿದ್ಯುತ್ ಅವಶ್ಯಕತೆ ಇರುವುದಿಲ್ಲ.
ಇವಿಎಂನಲ್ಲಿ ಮತದಾನ ಮಾಡುವುದು ಹೇಗೆ?
ಮತದಾರರು ಮತಗಟ್ಟೆಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಅಧಿಕಾರಿಗಳು ಮೊದಲು ಮತದಾರನ ಹೆಸರನ್ನು ಖಾತ್ರಿ ಪಡಿಸಿಕೊಂಡು ಗುಪ್ತ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಾರೆ. ಮತದಾರರು ಇವಿಎಂ ಬಳಿ ಹೋಗುತ್ತಿದ್ದಂತೆ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳು ಇರುತ್ತವೆ. ಅದರ ಪಕ್ಕದಲ್ಲೇ ನೀಲಿ ಬಣ್ಣದ ಬಟನ್ (ಮೊಮೆಂಟರಿ ಸ್ವಿಚ್) ನೀಡಲಾಗಿರುತ್ತದೆ.
ಮತದಾರರು ತಮಗೆ ಇಷ್ಟವಾದ ಅಭ್ಯರ್ಥಿಯ ಹೆಸರಿನ ಮತ್ತು ಪಕ್ಷದ ಗುರುತಿನ ಮುಂದಿರುವ ನೀಲಿ ಬಟನ್ ಒತ್ತಿ ಮತ ಚಲಾಯಿಸಬೇಕು. ಆಗ ಒಂದು ಬೀಪ್ ಸೌಂಡ್ ಬರುತ್ತದೆ. ಅದು ನಿಮ್ಮ ಮತದಾನ ಪೂರ್ಣವಾಗಿದೆ ಎಂದು ಅರ್ಥ.
ಈ ಸುದ್ದಿ ಓದಿದ್ದೀರಾ? ಫೋಟೋ ಆಲ್ಬಮ್ | ಮತದಾನಕ್ಕೆ ಸಿದ್ಧವಾದ ಮತಗಟ್ಟೆಗಳು
ವಿವಿ ಪ್ಯಾಟ್ ಬಳಕೆ
ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ಕ್ಷಣದಲ್ಲೇ ವೀಕ್ಷಣೆ ಮಾಡಬಹುದು. ಅದು ವಿವಿ ಪ್ಯಾಟ್ ಮೂಲಕ. ಮತ ಚಲಾಯಿಸಿದವರಿಗೆ ಮಾತ್ರ ವೀಕ್ಷಣೆಗೆ ಈ ಅವಕಾಶ ಇದೆ.
ಇವಿಎಂ ಜೊತೆಗೆ ಬಳಸಲಾಗುವ ವಿವಿ ಪ್ಯಾಟ್ ನಲ್ಲಿ ನಾವು ಯಾವ ಪಕ್ಷದ ಗುರುತಿಗೆ ಮತ ಹಾಕಿದ್ದೇವೆ ಎಂಬದು 7 ಸೆಕೆಂಡ್ ಒಳಗಾಗಿ ವಿವಿ ಪ್ಯಾಟ್ ನಲ್ಲಿ ಅಧಿಕೃತವಾಗಿ ತಿಳಿಯಲಿದೆ. ಮತಯಂತ್ರದ ಜತೆ ಅಳವಡಿಸುವ ವಿವಿ ಪ್ಯಾಟ್‌ನಲ್ಲಿ ಮುದ್ರಣವಾಗುವ ಖಾತರಿ ಪತ್ರಕ್ಕೆ ಕರೆನ್ಸಿ ನೋಟುಗಳಿಗೆ ನೀಡುವ ರೀತಿಯಲ್ಲಿ ಭದ್ರತಾ ಕೋಡ್ ನೀಡಲಾಗುತ್ತದೆ. ಹೀಗಾಗಿ, ಮತಯಂತ್ರಗಳನ್ನು ಹ್ಯಾಕ್ ಮಾಡುವುದು ಅಸಾಧ್ಯ ಎಂಬುದು ಚುನಾವಣೆ ಆಯೋಗದ ಸ್ಪಷ್ಟನೆ.
ಮತದಾನದ ವೇಳೆ ಇವಿಎಂ ಕೆಟ್ಟುಹೋದರೆ ಹೇಗೆ?
ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿರುವಾಗ ಅಕಸ್ಮಾತಾಗಿ ಇವಿಎಂ ಕೆಟ್ಟು ಹೋದರೆ ಬೇರೊಂದು ಇವಿಎಂಗೆ ಬದಲಾಯಿಸಿಕೊಂಡು ಮತದಾನ ಮುಂದುವರೆಸಬಹುದು. ಕೆಟ್ಟು ಹೋದ ಇವಿಎಂನಲ್ಲಿ ಮತಗಳು ಕಂಟ್ರೋಲ್ ಯೂನಿಟ್‌ನಲ್ಲಿ ಭದ್ರವಾಗಿರುತ್ತದೆ. ಪುನಃ ಆರಂಭದಿಂದಲೇ ಮತದಾನ ಮಾಡಬೇಕಾದ ಅವಶ್ಯಕತೆ ಇಲ್ಲ.