- ‘ಸುಪ್ರೀಂಕೋರ್ಟ್‌ನಿಂದ ರಾಜ್ಯ ಸರ್ಕಾರಕ್ಕೆ ತಪರಾಕಿ’
- ‘ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ’
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿ, ಸಂವಿಧಾನದ ಮಹತ್ವವನ್ನು ಹೇಳಿದ್ದಾರೆ.
“ಮತ್ತೆ ಮತ್ತೆ ಹೇಳುತ್ತೇನೆ, ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಯ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ” ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
“ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ. ಈ ಋಣ ಸಂದಾಯಕ್ಕೆ ನನ್ನ ರಾಜಕೀಯ ಮುಡಿಪು” ಎಂದು ತಿಳಿಸಿದ್ದಾರೆ.
“ನಿರ್ಲಕ್ಷ್ಯ, ತುಚ್ಛೀಕರಣ, ದೈವೀಕರಣದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದಮನಿಸಲು ಪ್ರಯತ್ನಿಸಿ ವಿಫಲರಾದ ಕೋಮುವಾದಿ ಶಕ್ತಿಗಳು ಈಗ ಬಾಬಾಸಾಹೇಬರನ್ನು ಆಪೋಶನ ತೆಗೆದುಕೊಂಡು ತಮ್ಮವರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗದೆ ರಾಜಕೀಯ ಪ್ರಜಾಪ್ರಭುತ್ವ ಬಾಳಲಾರದು ಎಂಬ ಅಂಬೇಡ್ಕರರ ಎಚ್ಚರಿಕೆಯ ಸಂದೇಶವನ್ನು ನಾನು ಮಂಡಿಸಿರುವ ಹದಿಮೂರು ಬಜೆಟ್ ಗಳಲ್ಲಿ ಪಾಲಿಸಿದ್ದೇನೆ” ಎಂದು ತಮ್ಮ ಮುಖ್ಯಮಂತ್ರಿ ದಿನಗಳನ್ನು ನೆನೆದಿದ್ದಾರೆ.
“ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯ ಪ್ರತಿರೂಪವಾಗಿರುವ ಸಂವಿಧಾನಕ್ಕೆ ಎದುರಾಗಿರುವ ಬೆದರಿಕೆಯ ವಿರುದ್ಧ ಹೋರಾಡುವುದೇ ಸಂವಿಧಾನ ಶಿಲ್ಪಿಗೆ ನಾವು ಸಲ್ಲಿಸುವ ಅತ್ಯುನ್ನತ ಗೌರವ. ಈ ಹೋರಾಟಕ್ಕೆ ಬಾಬಾಸಾಹೇಬರ ಚಿಂತನೆಗಳು ನಮ್ಮ ಆಯುಧವಾಗಲಿ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ |ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಪ್ರಚಾರ ಆರೋಪ; ನಾಲ್ವರು ಪೊಲೀಸರ ವರ್ಗಾವಣೆ
ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿದ್ದ ಬಿಜೆಪಿ ಸರ್ಕಾರದ ನಿರ್ಧಾರ ದೋಷಪೂರಿತವಾದುದ್ದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಸಂಬಂಧ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
“ಮುಸ್ಲಿಂ ಮೀಸಲಾತಿ ರದ್ದತಿಗಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತವಾಗಿತ್ತು. ಚುನಾವಣೆಯನ್ನು ಮನಸ್ಸಲ್ಲಿಟ್ಟುಕೊಂಡು ಹಿಂದೂ ಮತಗಳ ಧ್ರುವೀಕರಣದ ದುರುದ್ದೇಶದ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಈಗಲಾದರೂ ವಾಪಸು ಪಡೆದು ಮಾನ ಉಳಿಸಿಕೊಳ್ಳಬೇಕು” ಎಂದು ವ್ಯಂಗ್ಯವಾಡಿದ್ದಾರೆ.
“ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ ಕರ್ನಾಟಕ ಸರ್ಕಾರ ಕೈಗೊಂಡಿರುವ ನಿರ್ಧಾರ ‘ದೋಷಪೂರಿತ’ ಮತ್ತು ‘ತಪ್ಪು ಕಲ್ಪನೆ’ಯನ್ನು ಆಧರಿಸಿದೆ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಬುನಾದಿಯೇ ಅತ್ಯಂತ ಅಸ್ಥಿರವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿರುವುದು ರಾಜ್ಯ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದೆ” ಎಂದು ಟ್ವೀಟ್ ಮಾಡಿದ್ದಾರೆ.
“ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಯನ ಆಧರಿತವಾದ ವರದಿ, ವಿಶ್ವಾಸಾರ್ಹ ಅಂಕಿ-ಅಂಶಗಳ ಸಂಗ್ರಹ ಹೀಗೆ ಯಾವುದೇ ತಯಾರಿ ಇಲ್ಲದೆ ಅತ್ಯವಸರದಿಂದ ಮುಸ್ಲಿಂ ಮೀಸಲಾತಿ ರದ್ದುಪಡಿಸಿರುವುದಕ್ಕೆ ಚುನಾವಣಾ ಲಾಭದ ದುರುದ್ದೇಶ ಬಿಟ್ಟರೆ ಬೇರೆ ಕಾರಣಗಳಿರಲಿಲ್ಲ” ಎಂದಿದ್ದಾರೆ.
“ಒಳ ಮೀಸಲಾತಿ ಮತ್ತು ಒಕ್ಕಲಿಗ, ಲಿಂಗಾಯತ ಇಲ್ಲವೇ ಇತರ ಅರ್ಹ ಜಾತಿಗಳಿಗೆ ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ ಪಕ್ಷದ ವಿರೋಧ ಇಲ್ಲ. ಆದರೆ ಕಲ್ಪಿತ ಸುಳ್ಳುಗಳ ಮೂಲಕ ಬಿಜೆಪಿ ಕನ್ನಡಿಯೊಳಗಿನ ಗಂಟು ತೋರಿಸಿ ಜನರನ್ನು ತಪ್ಪು ದಾರಿಗೆಳೆಯಲು ಹೊರಟಿದೆ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿ ಎಲ್ಲ ಜಾತಿ ಜನರಿಗೆ ಅವರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಲು ಖಂಡಿತ ಕ್ರಮಕೈಗೊಳ್ಳುತ್ತೇವೆ. ಯಾರ ಮೀಸಲಾತಿಯನ್ನೂ ರದ್ದುಗೊಳಿಸದೆ ಸರ್ವಸಮ್ಮತ ಪರಿಹಾರ ನೀಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.
“ಕೇಂದ್ರ ಸರ್ಕಾರ ಈಗಾಗಲೇ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ನೀಡಿ ಶೇಕಡಾ 50ರ ಮಿತಿಯನ್ನು ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು” ಎಂದು ಆಗ್ರಹಿಸಿದ್ದಾರೆ.