- ಐಟಿ ದಾಳಿಗೆ ನಾವು ಹೆದರಲ್ಲ ಎಂದ ಡಿಕೆಶಿ
- ಬಿಜೆಪಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ
ಬಿಜೆಪಿ ನಾಯಕರು ಐಟಿ ಅಧಿಕಾರಗಳ ಮೂಲಕ ಕಾಂಗ್ರೆಸ್ ನಾಯಕರನ್ನು ಮತ್ತು ಇತರೆ ಉದ್ಯಮಿಗಳನ್ನು ಹೆದರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್ ಅವರು ಐಟಿ ಅಧಿಕಾರಿಗಳ ದಾಳಿ ಕುರಿತು ಮಾತನಾಡಿದರು.
“ಐಟಿ ಅಧಿಕಾರಿಗಳು ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿಯಾಗಿಸುತ್ತಿಲ್ಲ. ಜೊತೆಗೆ ನಮ್ಮ ನಾಯಕರ ಜೊತೆಗಿರುವ ಉದ್ದಿಮೆದಾರರನ್ನೂ ಸಹ ಗುರಿ ಮಾಡಿಕೊಂಡಿದ್ದಾರೆ” ಎಂದು ಹೇಳಿದರು.
“ಕಾಂಗ್ರೆಸ್ ನಾಯಕರ ಮನೆಗೆ ಬಂದು ಹೋಗುವ ‘ಬ್ಯುಸಿನೆಸ್ ಮನ್’ಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಐಟಿ ಅಧಿಕಾರಿಗಳ ದಾಳಿ ಕುರಿತು ಅವರೆಲ್ಲ ಭಯಬಿದ್ದಿದ್ದಾರೆ. ಆ ಕಾರಣದಿಂದ ಅವರು ನಮ್ಮ ಕರೆಗಳನ್ನೂ ಸ್ವೀಕರಿಸುತ್ತಿಲ್ಲ” ಎಂದು ಡಿಕೆ ಶಿವಕುಮಾರ್ ಹೇಳಿದರು.
“ಐಟಿ ಅಧಿಕಾರಿಗಳ ನಮ್ಮ ಮೇಲಷ್ಟೆ ದಾಳಿ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಇರುವವರೆಲ್ಲ ಸತ್ಯ ಹರಿಶ್ಚಂದ್ರರೇ. ರಾಜಕೀಯ ಪ್ರೇರಿತ ದಾಳಿಗಳನ್ನು ನಾವು ಹೆದರಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ: ನನಗೆ ಟಿಕೆಟ್ ತಪ್ಪಲು ಬಿ ಎಲ್ ಸಂತೋಷ್ ಕಾರಣ : ಜಗದೀಶ್ ಶೆಟ್ಟರ್
“ಏಳು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ ಅವರನ್ನು ಕ್ಷಣಾರ್ಧದಲ್ಲೇ ಅನರ್ಹ ಮಾಡಿದ ಸಂದರ್ಭದಲ್ಲಿ ಈ ಬಿಜೆಪಿಯವರು ಪ್ರಜಾಪ್ರಭುತ್ವವನ್ನು ಸುಟ್ಟರು” ಎಂದರು.
ಶೆಟ್ಟರ್, ಸವದಿ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, “ಈ ಮೊದಲು ನಮ್ಮ ಗುರಿ 140 ಸ್ಥಾನಗಳಾಗಿತ್ತು. ಆದರೆ, ಸವದಿ ಮತ್ತು ಶೆಟ್ಟರ್ ಆಗಮನದಿಂದ ನಾವು 150 ಸ್ಥಾನಗಳನ್ನು ಗೆಲ್ಲಲಿದ್ದೇವೆ. ಲಿಂಗಾಯತ ಮತ್ತು ವೀರಶೈವ ಮತ ಬರುತ್ತವೆ” ಎಂದು ಹೇಳಿದರು.
“ಶೆಟ್ಟರ್ ಮತ್ತು ಸವದಿ ಒಪ್ಪಿರುವವುದರಿಂದ ನಾವು ಬಿಜೆಪಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ ನೀಡುತ್ತೇವೆ. ನಮ್ಮ ಸಿದ್ಧಾಂತ ಒಪ್ಪಿ ಬರುವ ಎಲ್ಲರಿಗೂ ಸ್ವಾಗತ” ಎಂದು ತಿಳಿಸಿದರು.