ಯಾರು ನಮ್ಮ ಜೊತೆಗೆ ಇದ್ದಾರೋ ಅವರ ಮೇಲೆ ಐಟಿ ದಾಳಿ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್‌ನವರನ್ನು ಹೆದರಿಸೋಕೆ ಅವರು ಏನು ಬೇಕಾದರೂ ಮಾಡಲಿ. ನಾವು ರಾಜ್ಯದಲ್ಲಿ ಬದಲಾವಣೆ ತಂದೇ ತರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ಪೂಜಾರಿಯ ಅವರ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಶನಿವಾರ ಬೆಳಗ್ಗೆ 14 ಮಂದಿ ಅಧಿಕಾರಿಗಳು ವಿವೇಕ್ ಪೂಜಾರಿಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ನಡೆಸಿದ್ದರು. ಸಿ ಟಿ ರವಿ ಸ್ಪರ್ಧಿಸುವ ಚಿಕ್ಕಮಗಳೂರು ಕ್ಷೇತ್ರದ ಉಸ್ತುವಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ವಿವೇಕ್ ಅವರಿಗೆ ನೀಡಿದೆ” ಎಂದು ಹೇಳಿದರು.
“ಬಿವಿ ನಾಯಕ್ ಅವರು ಕಾಂಗ್ರೆಸ್ ತೊರೆದಿರುವುದು ಗೊತ್ತಿದೆ. ಆದರೆ ದೇವದುರ್ಗ ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸುವ ಬಗ್ಗೆ ಯಾವುದೇ ಬೇಡಿಕೆ ಸ್ಥಳೀಯವಾಗಿ ಬಂದಿಲ್ಲ. ನಮ್ಮ ಕ್ಯಾಂಡಿಡೇಟ್ ಸ್ಟ್ರಾಂಗ್ ಆಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನವರು ಚೆಸ್ ಆಟ ಆಡ್ತಿದ್ದಾರೆ. ನಾವೂ ಆಡುತ್ತಿದ್ದೇವೆ” ಎಂದರು.
ಪದ್ಮನಾಭನಗರದಲ್ಲಿ ಡಿಕೆ ಸುರೇಶ್ ಸ್ಪರ್ಧೆ ಸಾಧ್ಯತೆ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, “ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡುಗೆ ಬೆಂಬಲ ಉತ್ತಮವಾಗಿಯೇ ಇದೆ. ರಘುನಾಥ ನಾಯ್ಡು ನಮ್ಮ ಅಭ್ಯರ್ಥಿ. ಅವರು ನಾಮಪತ್ರ ಸಲ್ಲಿಸುತ್ತಾರೆ. ನಾನೂ ಕೂಡ ನಾಮಪತ್ರ ಸಲ್ಲಿಕೆಗೆ ಹೋಗುತ್ತೇನೆ. ರಘುನಾಥ ನಾಯ್ಡುಗೆ ಗೆಲ್ಲುವ ವಾತಾವರಣ ಇದೆ” ಎಂದರು.