- ಜಗದೀಶ್ ಶೆಟ್ಟರ್ ಮನವೊಲಿಸಲು ಬಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
- ಪಕ್ಷದ ವಿರುದ್ಧ ಮುನಿಸಿಕೊಂಡ ಮಾಜಿ ಸಿಎಂ ಜೊತೆ ಸಂಧಾನ ಮಾತುಕತೆ
ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಹೊರಹಾಕಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮನವೊಲಿಕೆ ಕಾರ್ಯ ಭರದಿಂದ ಸಾಗಿದೆ.
ಪಕ್ಷದ ನಿರ್ಧಾರದ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿ ಅಗತ್ಯ ಬಿದ್ದರೆ ಸ್ವತಂತ್ರ ಸ್ಪರ್ಧೆಗೂ ಸಿದ್ಧ ಎಂದಿದ್ದ ಜಗದೀಶ್ ಶೆಟ್ಟರ್ ಅವರನ್ನು ಸಮಾಧಾನ ಪಡಿಸಲು ರಾಜ್ಯ ಬಿಜೆಪಿ ಬ್ರಿಗೇಡ್ ಇನ್ನಿಲ್ಲದ ಕಸರತ್ತು ಆರಂಭಿಸಿದೆ.
ಜಗದೀಶ್ ಶೆಟ್ಟರ್ ಪಕ್ಷಕ್ಕೆ ಬರುವುದಾದರೆ ಅವರಿಗೆ ಸ್ವಾಗತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆ ಬಳಿಕ ಬಿಜೆಪಿ ಪಾಳೆಯ ಶೆಟ್ಟರ್ ಅಸಮಾಧಾನ ಶಮನಕ್ಕೆ ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ.
ಇದರ ಭಾಗವಾಗಿ ಇಂದು( ಏಪ್ರಿಲ್15) ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜಗದೀಶ್ ಶೆಟ್ಟರ್ ಆವರ ಹುಬ್ಬಳ್ಳಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.
ಶೆಟ್ಟರ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಸಲುವಾಗಿ ಶುಕ್ರವಾರ ಸಿಎಂ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರೊಂದಿಗೂ ಚರ್ಚಿಸಿದ್ದರು.
ಪಕ್ಷಕ್ಕೆ ಶೆಟ್ಟರ್ ಅಗತ್ಯತೆಯನ್ನು ಅವರು ದೆಹಲಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಈಗ ಅದೇ ಹಾದಿಯಲ್ಲಿ ಸಾಗಿರುವ ಪ್ರಲ್ಹಾದ್ ಜೋಶಿ, ಮುನಿಸು ಮರೆತು ಪಕ್ಷದೊಂದಿಗೆ ಸಾಗಲು ಶೆಟ್ಟರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜೊತೆಗೆ ಅವರ ಬೇಡಿಕೆಯನ್ನೂ ಪಕ್ಷದ ಅಧ್ಯಕ್ಷರಿಗೆ ತಿಳಿಸುವುದಾಗಿ ಜೋಶಿ, ಶೆಟ್ಟರ್ ಗೆ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಆರಂಭದಲ್ಲಿ ಜಗದೀಶ್ ಶೆಟ್ಟರ್ ವಿಚಾರದಲ್ಲಿ ಕೊಂಚ ಹಗುರವಾಗಿಯೇ ನಡೆದುಕೊಂಡಿದ್ದ ಬಿಜೆಪಿಗೆ, ಹುಬ್ಬಳ್ಳಿ ಪಾಲಿಕೆಯಲ್ಲಿದ್ದ ಶೆಟ್ಟರ್ ಬೆಂಬಲಿಗರು ಸರಿಯಾದ ಪಾಠ ಕಲಿಸಿದ್ದರು. ತಮ್ಮ ನಾಯಕನಿಗಾದ ಅನ್ಯಾಯ ಪ್ರತಿಭಟಿಸಲು ತಮ್ಮ ಪಾಲಿಕೆ ಸದಸ್ಯ ಸ್ಥಾನಕ್ಕೆ ಆರಕ್ಕೂ ಹೆಚ್ಚುಮಂದಿ ರಾಜೀನಾಮೆ ಸಲ್ಲಿಸಿದ್ದರು.
ಈ ಬೆಳವಣೆಗೆ ಬಳಿಕ ಪಕ್ಷ ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿ ಪಕ್ಷಕ್ಕಾಗುವ ಅಪಮಾನ ಮತ್ತು ಹಿನ್ನಡೆ ತಪ್ಪಿಸಲು ಹಿರಿಯ ನಾಯಕರನ್ನು ಮಾತುಕತೆಗೆ ಕಳುಹಿಸಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? : ಜೆಡಿಎಸ್‌ನ ಭರವಸೆ ಪತ್ರ ಬಿಡುಗಡೆ
ಮತ್ತೊಂದು ಮಾಹಿತಿ ಪ್ರಕಾರ ಶೆಟ್ಟರ್ ಗೆ ಟಿಕೆಟ್ ಕೈ ತಪ್ಪಲು ಜೋಶಿ ಕಾರಣ ಎನ್ನುವ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಶೆಟ್ಟರ್‌ಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಲು ಅವರು ಮುಂದಾಗಿದ್ದಾರೆ.
ತಮ್ಮ ವಿರುದ್ಧ ಬಂದಿರುವ ಆರೋಪದಿಂದ ಮುಕ್ತವಾಗಲು ಜೋಶಿ, ಶೆಟ್ಟರ್ ಜೊತೆಗೆ ಮಾತುಕತೆ ನಡೆಸಲು ಅವರ ನಿವಾಸಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಇತ್ತ ಇಂದೇ ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಜಗದೀಶ್ ಶೆಟ್ಟರ್ ಈಗ ಇನ್ನೆರಡು ದಿನಗಳಿಗೆ ಅದನ್ನು ಮುಂದೂಡಿದ್ದಾರೆ.