- ಸಂವಿಧಾನ ಗಟ್ಟಿಯಾಗಿ ಉಳಿದರೆ ನಾವೆಲ್ಲರೂ ನೆಮ್ಮದಿಯಾಗಿರಲು ಸಾಧ್ಯ.
- ಭಾರತೀಯ ಸಂವಿಧಾನ ಮೂಲಕ ವರ್ತಮಾನದ ಸಮಸ್ಯೆಗಳನ್ನು ತಡೆಯಬಹುದು.
ಈ ದೇಶದಲ್ಲಿ ಸರ್ವರನ್ನು ಅಪ್ಪಿಕೊಳ್ಳುವುದು ಸಂವಿಧಾನ ಮಾತ್ರ. ಸಂವಿಧಾನ ಇರುವುದಕ್ಕಾಗಿಯೇ ನಾವೆಲ್ಲರೂ ಕೂಡಿ ಬದುಕಲು ಸಾಧ್ಯವಾಗಿದೆ ಎಂದು ಸಾಹಿತಿ, ಪ್ರಾಧ್ಯಾಪಕಿ ಡಾ. ಜಯದೇವಿ ಗಾಯಕವಾಡ ಅಭಿಪ್ರಾಯಪಟ್ಟರು.
ಕಲಬುರಗಿಯಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಹಾಗೂ ಕರ್ನಾಟಕ ಯುವ ಮುನ್ನಡೆ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಎಂ.ಪಿ.ಎಚ್.ಎಸ್ ಕಾಲೇಜಿನಲ್ಲಿ ಆಯೋಜಿಸಿದ ‘ಸಂವಿಧಾನ ಹಬ್ಬ-2023’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಸಂವಿಧಾನವೇ ಭಾರತದ ಮೂಲ ಬೇರು, ಅದು ಎಲ್ಲಿಯವರೆಗೆ ಗಟ್ಟಿಯಾಗಿರುತ್ತದೋ ಅಲ್ಲಿಯವರೆಗೆ ನಾವೆಲ್ಲ ಗಟ್ಟಿಯಾಗಿರುತ್ತೇವೆ. ಹೀಗಾಗಿ ಮೊದಲು ನಾವು ಸಂವಿಧಾನ ಉಳಿಸಿಕೊಳ್ಳುವುದು ಮುಖ್ಯವಾಗಿದೆ” ಎಂದರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕಿರಣ್ ಗಾಜನೂರು ಅವರು ಮಾತನಾಡಿ, “ಸಂವಿಧಾನದ ಮೌಲ್ಯಗಳನ್ನ ತುಳಿಯುವ ಕೆಲಸ ನಿರಂತರವಾಗಿ ನಡೆಯುತ್ತಿವೆ. ಸಂವಿಧಾನವನ್ನ ಬಳಸಿಕೊಂಡು ವರ್ತಮಾನದ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಯುವ ಸಮುದಾಯ ಕಾರ್ಯನಿರ್ವಹಿಸಬೇಕಿದೆ. ಇವತ್ತಿಗೂ ಮಹಿಳೆಯರನ್ನ ಹಿಂದಿನಂತೆಯೇ ದುಡಿಸಿಕೊಳ್ಳಲಾಗುತ್ತಿದೆ. ಸಂವಿಧಾನದ ಮೌಲ್ಯಗಳು ಉಲ್ಲಂಘನೆಯಾಗುತ್ತಲೇ ಇವೆ. ಹೀಗಾಗಿ ನಾವು ಮತ್ತೆ ಮತ್ತೆ ಸಂವಿಧಾನದ ಹಕ್ಕುಗಳ ಬಗ್ಗೆ ಮಾತಾಡಬೇಕಿದೆ. ನಮ್ಮ ಘನತೆ ಮತ್ತು ಗೌರವದ ಬದುಕು ಪಡೆಯಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? Live Updates | ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಆದೇಶಿಸಿದ ಸಿಡಬ್ಲ್ಯೂಆರ್‌ಸಿ
ಶಂಶುದ್ದೀನ್ ಪಟೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ಪ್ರತಿಯೊಬ್ಬರೂ ಓದಬೇಕು. ಓದುವುದರ ಜೊತೆಗೆ ಬದುಕಿನಲ್ಲಿ ಅನುಷ್ಠಾನಗೊಳಿಸದರೆ ಮಾತ್ರ ನಮ್ಮ ಸಮಾಜ ಸುಂದರವಾಗಿರಲು ಸಾಧ್ಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರದ ದಿಲ್ಶಾದ್ ಸುತಾರ, ಕಾಶಿನಾಥ, ನೇಹಾ ಹಾಗೂ ಅಶೋಕ್ ತಳಕೇರಿ ಹಾಗೂ ಸಂವಾದ ಒಡನಾಡಿಗಳು, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.