ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ನಾರಾಯಣಸ್ವಾಮಿ ಪರವಾಗಿ ನಟ ದರ್ಶನ್ ಪ್ರಚಾರ ನಡೆಸಿದ್ದು, ಮತಯಾಚನೆ ಮಾಡಿದ್ದಾರೆ.
ಬಂಗಾರಪೇಟೆಯಲ್ಲಿ ತೆರೆದ ವಾಹನದಲ್ಲಿ ಬಿಜೆಪಿ ಅಭ್ಯರ್ಥಿಯೊಂದಿಗೆ ನಟ ದರ್ಶನ್ ರೋಡ್ ಶೋ ನಡೆಸಿದ್ದು, ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ರಸ್ತೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು.
ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ದರ್ಶನ್ ಮಾಲಾರ್ಪಣೆ ಮಾಡುವ ಮೂಲಕ ತೆರೆದ ವಾಹನದಲ್ಲಿ ರೋಡ್ ಶೋ ಆರಂಭಿಸಿದರು. ನೆರೆದ ಜನರಿಗೆ ಕೈ ಬೀಸುತ್ತ ಅಭಿಮಾನಿಗಳನ್ನು ಖುಷಿಪಡಿಸಿದರು.
ನಂತರ ಕುವೆಂಪು ವೃತ್ತದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ದರ್ಶನ್, “ಬಂಗಾರಪೇಟೆ ಜನರ ಮನಸು ಬಂಗಾರದಂತಿದೆ. ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿ. ನಾನು ಹಲವು ಬಾರಿ ಪಟ್ಟಣಕ್ಕೆ ಬಂದಾಗ ಇಲ್ಲಿನ ಪಾನಿಪೂರಿ ಸವಿದು ಹೋಗುತ್ತೇನೆ. ಆದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇಲ್ಲಿನ ಪಾನಿಪೂರಿ ಪ್ರಸಿದ್ಧವಾಗಿದೆ” ಎಂದು ಹಾಡಿ ಹೊಗಳಿದರು.
“ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿಯವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು. ನಿಮ್ಮ ಸೇವೆ ಮಾಡಲು ಅವರಿಗೆ ಅವಕಾಶ ಮಾಡಿಕೊಡಬೇಕು” ಎಂದು ಹೇಳಿದರು.