- ಏಳು ಲಕ್ಷ ಜನರ ಸಮ್ಮುಖದಲ್ಲಿ ನಡೆಯಲಿರುವ ಜೈ ಭಾರತ ಸತ್ಯಾಗ್ರಹ
- ರಾಹುಲ್ ಅನರ್ಹತೆ ಪ್ರಶ್ನಿಸಿ ಸತ್ಯಾಗ್ರಹಕ್ಕೆ ಮುಂದಾದ ಕಾಂಗ್ರೆಸ್
ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿರುವ ಜೈ ಭಾರತ್ ಸತ್ಯಾಗ್ರಹ ಯಾತ್ರೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ.
ಏಪ್ರಿಲ್ 16ರ ಭಾನುವಾರ, ಬೆಳಗ್ಗೆ 11 ಗಂಟೆಗೆ ಭಾರತ ಸತ್ಯಾಗ್ರಹ ಯಾತ್ರೆಗೆ ಚಾಲನೆ ದೊರಕಲಿದೆ. ಕೋಲಾರದ ದೇವರಾಜ ಅರಸು ಕಾಲೇಜಿನ ಎದುರಿನಿಂದ ಈ ಯಾತ್ರೆ ಹೊರಡಲಿದೆ.
2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕೋಲಾರದಲ್ಲಿ ಮಾಡಿದ ಭಾಷಣದ ಕಾರಣ ನೀಡಿ ರಾಹುಲ್ ಗಾಂಧಿ ಅನರ್ಹತೆ ಮಾಡಿರುವ ಕ್ರಮ ಖಂಡಿಸುವುದು ಹಾಗೂ ದೇಶದ ಪ್ರಜಾಪ್ರಭುತ್ವ ಉಳಿವಿಗಾಗಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಸತ್ಯಾಗ್ರಹದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಸೇರಿದಂತೆ ರಾಜ್ಯದ ಇತರ ನಾಯಕರು ಭಾಗವಹಿಸಲಿದ್ದಾರೆ.
ಇತ್ತ ಯಾತ್ರೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, “7 ಲಕ್ಷ ಮತಗಳ ಅಂತರದಲ್ಲಿ ಗೆದ್ದು ಸಂಸತ್ ಸದಸ್ಯರಾದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ್ದಾರೆ.
ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಮಾನ. ರಾಹುಲ್ ಗಾಂಧಿ ಅವರು ಎಲ್ಲಿ ಭಾಷಣ ಮಾಡಿದ್ದರೋ ಅಲ್ಲಿಯೇ ಮತ್ತೆ ಭಾಷಣ ಮಾಡಬೇಕು ಎಂದು ನಾವೆಲ್ಲ ತೀರ್ಮಾನಿಸಿ ಈ ಸತ್ಯಾಗ್ರಹ ಯಾತ್ರೆ ಹಮ್ಮಿಕೊಂಡಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? :ಸಿದ್ದರಾಮಯ್ಯಗೆ ಕೋಲಾರ ಟಿಕೆಟ್ ಮಿಸ್ ಆಗಿದ್ದಕ್ಕೆ ರಮೇಶ್ ಕುಮಾರ್ ಮುನಿಸು; ಸುರ್ಜೇವಾಲಾ ಭೇಟಿ
ವಯನಾಡ್ ಕ್ಷೇತ್ರದ ಸಂಸದರಾಗಿದ್ದ ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ಕಾಂಗ್ರೆಸ್ ಈಗಾಗಲೇ ಹಲವು ಪ್ರತಿಭಟನೆಗಳನ್ನು ನಡೆಸಿದೆ. ಅದರ ಮುಂದುವರೆದ ಭಾಗವಾಗಿ ಕೋಲಾರದಲ್ಲೂ ಈ ಯಾತ್ರೆ ಆಯೋಜನೆಯಾಗಿದೆ.