ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕನ್ನು ಹೊಸ ಜಿಲ್ಲಾ ಕೇಂದ್ರವಾಗಿ ಮಾಡಬೇಕು ಎಂಬಕೂಗು ತಾಲೂಕಿನಲ್ಲಿ ಕೇಳಿಬರುತ್ತಿದೆ. ಕೊಪ್ಪಳ ಜಿಲ್ಲೆಯನ್ನು ವಿಭಜಿಸಿ, ಹೊಸ ಜಿಲ್ಲೆಗೆ ʼಕಿಷ್ಕಿಂದಾʼ ಜಿಲ್ಲೆ ಎಂದು ನಾಮಕರಣ ಮಾಡಬೇಕು ಎನ್ನು ಕೂಗು ಗಂಗಾವತಿಯಲ್ಲಿ ಕೇಳಿ ಬರುತ್ತಿದೆ.
ಈ ಭಾಗದ ಹಾಲಿ, ಮಾಜಿ ಜನಪ್ರತಿನಿಧಿಗಳು, ಹಲವು ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ಸೇರಿ ಸಭೆ ನಡೆಸಿದ್ದು,ಕಾವೇರಿ ಗಲಾಟೆ ನಡುವೆ ಮತ್ತೊಂದು ಹೋರಾಟ ಪ್ರತ್ಯೇಕ ಜಿಲ್ಲೆಯ ಕೂಗು ಜೋರಾಗುವ ಸಾಧ್ಯತೆಗಳಿವೆ. ಇಷ್ಟು ದಿನ ತೆರೆಮರೆಯಲ್ಲಿ ಸಭೆ ನಡೆಸುತ್ತಿದ್ದ ಹೋರಾಟಗಾರರು, ಇದೀಗ ಬಹಿರಂಗವಾಗಿಯೇ ಪೂರ್ವಭಾವಿ ಸಭೆ ನಡೆಸಿದ್ದಾರೆ.
ಗಂಗಾವತಿಯ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ನಡೆಸಿದ್ದಾರೆ. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗುರು ಸೇರಿ ಹಲವು ರಾಜಕಿಯ ಮುಖಂಡರು, ಹಾಲಿ, ಮಾಜಿ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಕಿಷ್ಕಿಂದಾ ಜಿಲ್ಲಾ ರಚನೆಗೆ ಎಲ್ಲರೂ ಸಹಮತ ಸೂಚಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ಕಿಷ್ಕಿಂದಾ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವ್ಯಾಪಾರ ವಹಿವಾಟು ಹೊಂದಿದೆ. ಅಲ್ಲದೆ, ಗಂಗಾವತಿಯ ಆನೆಗೊಂದಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಹನುಮನ ಜನ್ಮ ಸ್ಥಾನ ಅಂಜನಾದ್ರಿ ಸಹ ಗಂಗಾವತಿ ತಾಲೂಕಿನಲ್ಲಿದೆ ಜಿಲ್ಲಾ ಕೇಂದ್ರದಿಂದ ೫೦ಕಿಲೋ ಮೀಟರ್ ದೂರದಲ್ಲಿ ಇದ್ದರೂ ಗಂಗಾವತಿ ಭಾಗದಲ್ಲಿ ಅಭಿವೃದ್ಧಿ ಕುಂಟಿತವಾಗಿದೆ.
ಕಿಷ್ಕಿಂದಾ ಜಿಲ್ಲೆಯಾದ್ರೆ ಗಂಗಾವತಿ ಸೇರಿದಂತೆ ಉಳಿದ ತಾಲೂಕುಗಳು ಅಭಿವೃದ್ಧಿಯಾಗತ್ತದೆ. ಭತ್ತದ ಕಣಜ ಎಂದೆ ಹೆಸರಾಗಿರುವ ಗಂಗಾವತಿ, ಆನೆಗೊಂದಿ ಭಾಗಕ್ಕೆ ಹೆಚ್ಚಿನ ಅನುಧಾನ ಸಿಕ್ಕು ಜಿಲ್ಲೆಯ ಜನರು ಅಭಿವೃದ್ಧಿ ಕಾಣುತ್ತಾರೆ. ಹೀಗಾಗಿ ಕಿಷ್ಕಿಂದಾ ಜಿಲ್ಲೆ ರಚನೆ ಅನಿವಾರ್ಯವಾಗಿದೆ. ಸರ್ಕಾರ ಈ ಬಗ್ಗೆ ಗಮನ ನೀಡಿ ಹೋರಾಟ ಆರಂಭಕ್ಕೂ ಮುನ್ನವೇ ಸರ್ಕಾರ ಕಿಷ್ಕಿಂದಾ ಜಿಲ್ಲೆಯ ಘೋಷಣೆ ಮಾಡಬೇಕು.,
ಆದ್ದರಿಂದ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯಿಂದ ದೂರವಿರುವ ಸಿಂಧನೂರು, ಕಂಪ್ಲಿ ಹಾಗೂ ಕೊಪ್ಪಳ ಜಿಲ್ಲೆಯ ಕನಕಗಿರಿ, ಕಾರಟಗಿ, ಗಂಗಾವತಿ ತಾಲೂಕುಗಳನ್ನ ಒಟ್ಟಿಗೆ ಸೇರಿಸಿ ಕಿಷ್ಕಿಂದಾ ನೂತನ ಜಿಲ್ಲೆಯಾಗಿ ಮಾಡಬೇಕು ಎನ್ನುವುದು ಇವರ ಬೇಡಿಕೆ.
ಗಂಗಾವತಿ ಜಿಲ್ಲಾ ಕೇಂದ್ರದ ಎಲ್ಲಾ ಮಾನದಂಡಗಳನ್ನು ಹೊಂದಿದೆ. ಜನಸಂಖ್ಯೆ, ಬೌಗೋಳಿಕ ವಿಸ್ತೀರ್ಣ, ರಸ್ತೆ, ರೈಲು ಮಾರ್ಗಗಳು, ಕೈಗಾರಿಕೆ, ವ್ಯಾಪಾರ ವಹಿವಾಟು ಎಲ್ಲ ಅರ್ಹತೆಯೂ ಗಂಗಾವತಿಗೆ ಇದ್ದಾಗಲೂ ಸರ್ಕಾರ ಜಿಲ್ಲಾ ರಚನೆ ಮಾಡಲು ವಿಳಂಭ ಮಾಡಬಾರದು, ಕೂಡಲೇ ಜಿಲ್ಲೆಯಾಗಿ ರಚನೆ ಮಾಡಬೇಕು ಎನ್ನುವುದು ಇವರುಗಳ ಆಗ್ರಹ.