ಶಾಲಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಭಟ್ಕಳ ತಾಲೂಕಿನ ಹೊರವಲಯದಲ್ಲಿ ನಡೆದಿದೆ.
ನಿರುಪಾದಿ ದುರುಗಪ್ಪ (14) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಎನ್ನಲಾಗಿದೆ.

ಎರಡು ದಿನದ ಹಿಂದೆ ಪ್ರವಾಸಕ್ಕೆಂದು ಶಾಲಾ ಮಕ್ಕಳು ಹಾಗೂ ಶಿಕ್ಷಕರು ಮಲೆನಾಡು ಭಾಗಕ್ಕೆ ತೆರಳಿದ್ದರು. ಭಟ್ಕಳ ನಗರ ದಾಟಿದ ನಂತರ ಗ್ರಾಮವೊಂದರಲ್ಲಿ ಮೂತ್ರ ವಿಸರ್ಜನೆಗೆ ಬಸ್ ನಿಲ್ಲಿಸಲಾಗಿತ್ತು. ಎಲ್ಲ ಮಕ್ಕಳು ಮೂತ್ರ ವಿಸರ್ಜನೆ ಮಾಡಿ ಬಸ್ ಹತ್ತಿದ್ದರು. ನಂತರ ನಿರುಪಾದಿ ಮೆಡಿಕಲ್ ಅಂಗಡಿಗೆ ತೆರಳಿ ಮಾತ್ರೆ ತಗೆದುಕೊಂಡು ಹಿಂದಿರುಗುವಾಗ ಬಾವಿಯಲ್ಲಿ ಬಿದ್ದಿದ್ದಾನೆ ಎಂದು ವಿದ್ಯಾರ್ಥಿಯ ಅಣ್ಣ ಮಾಹಿತಿ ನೀಡಿದರು.
ಶಿಕ್ಷಕರು ಆ ಗ್ರಾಮದಿಂದ ಸ್ವಲ್ಪ ದೂರದಲ್ಲೇ ಹೋದಾಗ ಮಕ್ಕಳನ್ನು ಎಣಿಸಿದ್ದಾರೆ. ಒಬ್ಬ ವಿದ್ಯಾರ್ಥಿ ಕಡಿಮೆ ಇರುವ ಕಾರಣಕ್ಕೆ ಹಿಂತಿರುಗಿ ಅದೇ ಗ್ರಾಮಕ್ಕೆ ವಾಪಸಾಗಿದ್ದಾರೆ. ಅಷ್ಟರಲ್ಲಿ ಆ ಗ್ರಾಮದ ಜನ ಬಾವಿಯಲ್ಲಿ ಬಿದ್ದ ವಿದ್ಯಾರ್ಥಿಯ ಶವ ಹೊರತೆಗೆದಿದ್ದರು.
ಶಾಲೆಯ ಒಟ್ಟು 105 ಮಂದಿ ಮಕ್ಕಳು, 13 ಮಂದಿ ಶಿಕ್ಷಕರು ಒಗ್ಗೂಡಿ ನಾಲ್ಕು ದಿನದ ಪ್ರವಾಸಕ್ಕೆ ತೆರಳಿದ್ದರು. ವಿದ್ಯಾರ್ಥಿ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
