ಸಂಸತ್ತಿನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅಗೌರವದ ಹೇಳಿಕೆ ನೀಡಿದ್ದನ್ನು ವಿರೋಧಿಸಿ ಕೊಪ್ಪಳದಲ್ಲಿ ನಡೆಸಿದ ‘ಬಂದ್’ ಸಂಪೂರ್ಣ ಯಶಸ್ವಿಯಾಗಿದೆ.
‘ಬಂದ್’ ಪರಿಣಾಮ ನಗರದ ಬೀದಿ ವ್ಯಾಪಾರಿಗಳು, ಹೋಟೆಲ್, ಕಿರಾಣಿ ಅಂಗಡಿ ಸೇರಿದಂತೆ ಹಲವು ವ್ಯಾಪಾರಸ್ಥರು ವ್ಯಾಪಾರ-ವಹಿವಾಟುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಸ್ವಯಂಪ್ರೇರಿತರಾಗಿ ‘ಬಂದ್’ಗೆ ಬೆಂಬಲ ಸೂಚಿಸಿದರು. ಪ್ರತಿಭಟನಾಕಾರರು ನಗರದ ಅಶೋಕ ಸರ್ಕಲ್ ಮೂಲಕ ಹಾದು ಪಟ್ಟಣದ ಮುಖ್ಯ ಬೀದಿಗಳಲ್ಲಿ ‘ಅಂಬೇಡ್ಕರ್ ನಮ್ಮ ಉಸಿರು, ಅಂಬೇಡ್ಕರ್, ಅಂಬೇಡ್ಕರ್’, ‘ಕೊಲೆಗಡುಕ ಅಮಿತ್ ಶಾ ಅವರನ್ನ ಗಡಿಪಾರು ಮಾಡಿ’ ಎಂದು ಆಗ್ರಹಿಸಿ ಕೇಂದ್ರ ಸಚಿವರ ವಿರುದ್ಧ ಘೋಷಣೆ ಕೂಗಿದರು.

ಅಶೋಕ ಸರ್ಕಲ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕವಿ, ಲಡಾಯಿ ಪ್ರಕಾಶಕ, ಬಂಡಾಯ ಹೋರಾಟಗಾರ ಬಸವಾರಾಜ್ ಸೂಳಿಬಾವಿ ಮಾತನಾಡಿ “ಅಂಬೇಡ್ಕರ್ ಕುರಿತು ಅಮಿತ್ ಶಾ ನಿಂತು ಮಾತನಾಡಿದ ಭವನ ಕೂಡಾ ಅಂಬೇಡ್ಕರ್ ಅವರಿಂದ ಅಸ್ತಿತ್ವಕ್ಕೆ ಬಂದಿದ್ದು ಎಂಬುದನ್ನು ಸಚಿವರು ತಿಳಿದುಕೊಳ್ಳಬೇಕು. ಅವರು ಗೃಹ ಮಂತ್ರಿ ಆಗಲಿಕ್ಕೆ ಮೂಲ ಕಾರಣ ಸಂವಿಧಾನವೇ ಹೊರತು ದೇವರಲ್ಲ” ಎಂದು ವಾಗ್ದಾಳಿ ನಡೆಸಿದರು.
“ಧರ್ಮ- ದೇವರ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದ್ದೀರಿ. ಚಹಾ ಮಾರುವವರನ್ನು ಈ ದೇಶದ ಸಂವಿಧಾನ ಪ್ರಧಾನಿಯನ್ನಾಗಿ ಮಾಡಿದೆ. ಸ್ವರ್ಗ ನರಕ ನಿಮ್ಮ ಕಲ್ಪನೆಯ ಕಥೆಯೇ ಹೊರತು ವಾಸ್ತವ ಅಲ್ಲ. ಅದರಿಂದ ಶೋಷಣೆಗೆ ಒಳಗಾದ ಮಹಿಳೆಯರು, ದಲಿತರು ಹಿಂದುಳಿದವರು ಎಚ್ಚೆತ್ತುಕೊಳ್ಳಬೇಕಿದೆ” ಎಂದು ಕರೆಕೊಟ್ಟರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಚಿಂಚೋಳಿ ಬಂದ್‌ಗೆ ಉತ್ತಮ ಸ್ಪಂದನೆ : ಅಮಿತ್ ಶಾ ಅವರ ಅಣಕು ಶವಯಾತ್ರೆ
ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, “ನಾವು ಬಂದಿದ್ದೇ ಸಂವಿಧಾನ ಬದಲಾಯಿಸಲು ಎಂದು ಸಚಿವರು ಬಹಿರಂಗವಾಗಿ ಹೇಳಿದ್ದರು. ಇವರಿಗೆ ದಮ್ಮಿದ್ರೆ ಸಂವಿಧಾನ ಬದಲಾಯಿಸಲಿ.. ಇಡೀ ದೇಶದಲ್ಲಿ ರಕ್ತ ಹರಿಯುತ್ತದೆ. ನಮ್ಮ ದೇಶದ ಸಂವಿಧಾನವನ್ನು ಮೆಚ್ಚಿ ಅನೇಕ ದೇಶಗಳು ಬಾಬಾ ಸಾಹೇಬರ ಸಲಹೆ ಪಡೆದಿವೆ. ಅದನ್ನೇ ಬದಲಾಯಿಸುತ್ತೀವಿ ಎಂದು ಗಡಿಪಾರು ಆದಂತಹವರು ಮಾತನಾಡುತ್ತೀರಾ? ಇನ್ನೊಮ್ಮೆ ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತಂಟೆಗೆ ಬಂದರೆ ಇಡೀ ದೇಶ ಹೊತ್ತಿ ಉರಿಯುತ್ತದೆ” ಎಂದು ಎಚ್ಚರಿಕೆ ನೀಡಿದರು.

ಜ್ಯೋತಿ ಗೊಂಡಬಾಳ ಮಾತನಾಡಿ “ಹೋರಾಟ ಮಾಡಿ ಸ್ವಾತಂತ್ರ್ಯ ಪಡೆದವರು ನಾವು, ಇವತ್ತು ಮತ್ತೆ ನಮ್ಮ ಹಕ್ಕಿಗಾಗಿ, ಸಮಾನತೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಬೇಕಾದ ಸಂದರ್ಭ ಬರುತ್ತಿರುವುದು ದುರದೃಷ್ಟಕರ. ಈ ಹೋರಾಟಕ್ಕೆ ಸಜ್ಜಾಗಲು ಧೈರ್ಯ, ಸ್ಥೈರ್ಯ ಕೊಟ್ಟಿದ್ದು ಸಂವಿಧಾನ. ಸಂವಿಧಾನವನ್ನು ತಲೆ ಮೇಲೆ ಹೊತ್ತುಕೊಂಡು ನಾಟಕೀಯವಾಗಿ ನಡೆದುಕೊಳ್ಳುವ ಪ್ರಧಾನಿಗಳು ಉದ್ಧಟತನದಿಂದ ನಡೆದುಕೊಳ್ಳುವವರ ವಿರುದ್ಧ ಮೌನವಾಗಿರುತ್ತಾರೆ. ಮನುವಾದಿಗಳ ಕುತಂತ್ರ ಏನು ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು” ಎಂದು ಹೇಳಿದರು.
ಸಾವಿತ್ರಿ ಮುಜುಮ್‌ದಾರ ಮಾತಾನಾಡಿ, “ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ ಅಂದರೆ, ಅದಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ. ಅಂಬೇಡ್ಕರ್ ನಿಮಗೆ ಒಪ್ಪಿಗೆ ಇಲ್ಲದಿದ್ದರೆ ನಿಮ್ಮ ದೇವರನ್ನು ಸ್ಮರಿಸಿ ಸ್ವರ್ಗಕ್ಕೆ ಹೋಗಬಹುದು. ಮಣಿಪುರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಆದರೂ ತುಟಿ ಬಿಚ್ಚದ ನಿಮಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ಹಕ್ಕುಇಲ್ಲ. ಸ್ವರ್ಗ ನರಕ ನಮಗೆ ಗೊತ್ತಿಲ್ಲ ನಮಗೆ ದುಡಿದು ತಿನ್ನುವುದು ಮಾತ್ರ ಗೊತ್ತು” ಎಂದು ಆಕ್ರೋಶ ವ್ಯಕ್ತಪಡಿಸಿದರು.
