- ಕಳೆದ ಲೋಕಸಭಾ ಚುನಾವಣೆಯಲ್ಲಿ ಬಲಿಪಾಶುವಾದೆ
- ತಮ್ಮ ಇಳಿ ವಯಸ್ಸಿನಲ್ಲಿ ಭರ್ಜರಿ ಪ್ರಚಾರ ನಡೆಸಿದ ದೇವೇಗೌಡ
ಬಡವರ ಕಣ್ಣೀರು ಒರೆಸಲು ಎಚ್ ಡಿ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಅನಾರೋಗ್ಯದ ಸಮಸ್ಯೆಯಿಂದ ಎಚ್ ಡಿ ಕುಮಾರಸ್ವಾಮಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ತಮ್ಮ ಇಳಿ ವಯಸ್ಸಿನಲ್ಲಿ ಪಕ್ಷದ ಪರ ದೇವೇಗೌಡರು ಪ್ರಚಾರ ನಡೆಸುತ್ತಿದ್ದಾರೆ.
ತುಮಕೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ದೇವೇಗೌಡ ಅವರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಶಿರಾ, ಕೊರಟಗೆರೆ ಹಾಗೂ ಮಧುಗಿರಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕುಮಾರಸ್ವಾಮಿ ಈಗಾಗಲೇ ಎರಡು ಸಲ ಮುಖ್ಯಮಂತ್ರಿಯಾಗಿದ್ದಾರೆ. ಮತ್ತೊಮ್ಮೆ ಸಿಎಂ ಆಗುವ ಯಾವ ಕನಸು ಕೂಡ ಅವರಿಗೆ ಇಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾವು ಯಾವುದೇ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲ; ಅಮಿತ್ ಶಾಗೆ ಡಿಕೆಶಿ ತಿರುಗೇಟು
“ಆದರೆ, ಬಡವರ ಕಣ್ಣೀರು ಒರೆಸುವವರು ಕುಮಾರಸ್ವಾಮಿ ಮಾತ್ರ. ಆದ್ದರಿಂದ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಬೇಕು. ನೀವು ಅವರಿಗೆ ಶಕ್ತಿ ತುಂಬಬೇಕು” ಎಂದು ದೇವೇಗೌಡರು ಹೇಳಿದ್ದಾರೆ.
“ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ತುಮಕೂರಿನಿಂದ ಸ್ಪರ್ಧಿಸಲು ಬಯಸಿರಲಿಲ್ಲ. ನನ್ನ ವಯಸ್ಸಿನ ಕಾರಣಕ್ಕೆ ತುಂಬಾ ಸಮಸ್ಯೆ ಕಾಡುತ್ತಿವೆ. ಚುನಾವಣಾ ರಾಜಕೀಯ ಸಾಕಾಗಿದೆ. ರಾಜಕೀಯ ನಿವೃತ್ತಿಗೆ ಯೋಜಿಸಿದ್ದೆ. ಆದರೆ, ಜಿಲ್ಲೆಯ ಕೆಲವು ಮುಖಂಡರು ನನ್ನನ್ನು ಚುನಾವಣೆಗೆ ನಿಲ್ಲಿಸಿ ಬಲಿಪಶು ಮಾಡಿದರು” ಎಂದಿದ್ದಾರೆ.
“ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಕಣ್ಣೀರು ಹಾಕಿಸಲು ಕಾರಣರಾದವರನ್ನು ಕ್ಷೇತ್ರದ ಜನತೆ ಕಣ್ಣೀರು ಹಾಕುವಂತೆ ಮಾಡಿದರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ ದೊರೆಯಲಿದೆ” ಎಂದು ದೇವೇಗೌಡರು ಭಾವನಾತ್ಮಕವಾಗಿ ನುಡಿದಿದ್ದಾರೆ.