ಅತ್ತ ಮುಖ್ಯಮಂತ್ರಿ ಹುದ್ದೆಗಾಗಿ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ, ಇತ್ತ ಸಚಿವ ಸ್ಥಾನಕ್ಕಾಗಿ ಹಲವರು ಲಾಬಿ ನಡೆಸುತ್ತಿದ್ದಾರೆ. ನಮಗೂ ಮಂತ್ರಿಗಿರಿ ಬೇಕೆಂದು ಹಲವರು ಪಟ್ಟು ಹಿಡಿದಿದ್ದಾರೆ. ಅಂತಹ ಪ್ರಭಾವಿಗಳ, ಸಚಿವಾಕಾಂಕ್ಷಿಗಳ ಪಟ್ಟಿ ಇಲ್ಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಐದು ವರ್ಷಗಳ ಕಾಲ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲವೆಂಬ ವಿಶ್ವಾಸ ಪಕ್ಷದಲ್ಲಿದೆ. ಆದರೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಫೈಟ್ ನಡೆಯುತ್ತಿದೆ. ಸದ್ಯ, ಈ ಫೈಟ್ ಬೆಂಗಳೂರಿನಿಂದ ದೆಹಲಿಗೆ ಸ್ಥಳಾಂತರಗೊಂಡಿದೆ. ಸಿದ್ದರಾಮಯ್ಯ ಸೋಮವಾರವೇ ದೆಹಲಿಗೆ ತೆರಳಿದ್ದಾರೆ. ಶಿವಕುಮಾರ್ ಇಂದು (ಮಂಗಳವಾರ) ರಾಷ್ಟ್ರ ರಾಜಧಾನಿಯತ್ತ ಮುಖ ಮಾಡಿದ್ದಾರೆ. ಅಂತಿಮವಾಗಿ ಮುಖ್ಯಮಂತ್ರಿ ಯಾರೇ ಆದರೂ, ಅವರಿಗೆ ಮೊದಲ ಹಂತದಲ್ಲೇ ಸಚಿವ ಸಂಪುಟದ ತಲೆನೋವು ಎದುರಾಗಲಿದೆ.
ಅತ್ತ ಮುಖ್ಯಮಂತ್ರಿ ಹುದ್ದೆಗಾಗಿ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ, ಇತ್ತ ಸಚಿವ ಸ್ಥಾನಕ್ಕಾಗಿ ಹಲವರು ಲಾಬಿ ನಡೆಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಚಿವಾಕಾಂಕ್ಷಿಗಳ ಪಟ್ಟಿ ಸಿದ್ದಪಡಿಸಿದ್ದು, ಸುಮಾರು 62 ಶಾಸಕರ ಹೆಸರು ಪಟ್ಟಿಯಲ್ಲಿದೆ ಎಂದು ತಿಳಿದುಬಂದಿದೆ.
ಹೊಸ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯಗಳಿಗೂ ಅವಕಾಶ ನೀಡುವುದು ಅತ್ಯಗತ್ಯವಾಗಿದೆ. 2013-18ರವರೆಗಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಲ್ಲ ಸಮುದಾಯಗಳಿಗೂ ಅವಕಾಶ ನೀಡಲಾಗಿತ್ತು. ಅಂತೆಯೇ ಈ ಬಾರಿಯೂ ಆದ್ಯತೆ ನೀಡಬೇಕಾಗಿದೆ. ಜೊತೆಗೆ, ಪ್ರದೇಶವಾರು ಆದ್ಯತೆಯನ್ನೂ ನೀಡಬೇಕಾಗಿದೆ. ಆದರೆ, ಈ ಬಾರಿ ಪ್ರಭಾವಿಗಳ ಸಂಖ್ಯೆ ಹೆಚ್ಚಾಗಿರುವುದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸವಾಲು ಹೊಸ ಮುಖ್ಯಮಂತ್ರಿ ಮುಂದಿರಲಿದೆ.
ನಾನು ಮುಖ್ಯಮಂತ್ರಿ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ದ ಡಾ. ಜಿ ಪರಮೇಶ್ವರ್ ಸಚಿವ ಸ್ಥಾನದ ರೇಸ್‌ನಲ್ಲಿ ಮೊದಲಿದ್ದಾರೆ. ಅಲ್ಲದೆ, ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಮತ್ತು ಪ್ರಭಾವವಿರುವ ಕೆ.ಎಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಎಚ್.ಸಿ ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಎಂಬಿ ಪಾಟೀಲ್ ಸೇರಿದಂತೆ ಹಲವರ ಹೆಸರುಗಳು ಮುನ್ನೆಲೆಯಲ್ಲಿವೆ.
ರಾಜ್ಯ ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 12 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಇವರಲ್ಲಿ ಏಳು ಮಂದಿ ಸಚಿವ ಸ್ಥಾನದ ಪಟ್ಟಿಯಲ್ಲಿದ್ದಾರೆ.
1. ಕೃಷ್ಣಭೈರೇಗೌಡ
2. ಭೈರತಿ ಸುರೇಶ್
3. ರಿಜ್ವಾನ್ ಅರ್ಷದ್
4. ಕೆ.ಜೆ ಜಾರ್ಜ್
5. ದಿನೇಶ್ ಗುಂಡೂರಾವ್
6. ಜಮೀರ್ ಅಹ್ಮದ್ ಖಾನ್
7. ರಾಮಲಿಂಗಾರೆಡ್ಡಿ
ತುಮಕೂರಿನಲ್ಲಿ 11 ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದೆ. ಅವರಲ್ಲಿ ಮೂವರು ಸಚಿವಾಕಾಂಕ್ಷಿಗಳಿದ್ದಾರೆ.
1. ಡಾ. ಜಿ ಪರಮೇಶ್ವರ್
2. ಕೆ.ಎನ್ ರಾಜಣ್ಣ
3. ಟಿ.ಬಿ ಜಯಚಂದ್ರ
ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ.
1. ಸತೀಶ್ ಜಾರಕಿಹೊಳಿ
2. ಲಕ್ಷ್ಮೀ ಹೆಬ್ಬಾಳ್ಕರ್
3. ಲಕ್ಷ್ಮಣ ಸವದಿ
ಘಟಾನುಘಟಿಗಳು ಜಿಲ್ಲೆಯಿಂದ ಗೆದ್ದಿದ್ದಾರೆ. ಈ ಮೂವರೂ ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಮಹಿಳಾ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನದ ಹಂಚಿಕೆ ಮಾಡುವ ಅಗತ್ಯವಿದೆ.
ಇನ್ನು, ಬಾಗಲಕೋಟೆಯ 7 ಕ್ಷೇತ್ರಗಳಲ್ಲಿ ಐದನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಮೂವರು ಶಾಸಕರು ಸಚಿವ ಸಂಪುಟದಲ್ಲಿನ ಸ್ಥಾನಕ್ಕಾಗಿ ರೇಸ್‌ನಲ್ಲಿದ್ದಾರೆ.
1. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್
2. ಬಾಗಲಕೋಟೆ ಶಾಸಕ ಹೆಚ್.ವೈ ಮೇಟಿ
3. ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ
ಬಳ್ಳಾರಿ ಜಿಲ್ಲೆಯಲ್ಲಿ ಕ್ಲೀಸ್ ಸ್ವೀಪ್ ಮಾಡಿರುವ ಕಾಂಗ್ರೆಸ್, ಐದಕ್ಕೆ ಐದೂ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅವರಲ್ಲಿ ಇಬ್ಬರು ಸಚಿವಗಿರಿಗಾಗಿ ಕಾಯುತ್ತಿದ್ದಾರೆ.
1. ಶ್ರೀರಾಮುಲು ಸೋಲಿಸಿರೋ ನಾಗೇಂದ್ರ
2. ನಾಲ್ಕು ಬಾರಿ ಗೆದ್ದಿರುವ ತುಕಾರಾಂ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲೂ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಜಿಲ್ಲೆಯ 7 ಸ್ಥಾನಗಳಲ್ಲಿ ಕೈ ಶಾಸಕರು ಗೆದ್ದಿದ್ದಾರೆ. ಇವರಲ್ಲಿ ಐವರು ಸಚಿವ ಸ್ಥಾನದ ಪಟ್ಟಿಯಲ್ಲಿದ್ದಾರೆ.
1. ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ
2. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ಡಾ. ಅಜಯಸಿಂಗ್
3. ಸಿದ್ದರಾಮಯ್ಯ ಆಪ್ತ ಬಿ.ಆರ್ ಪಾಟೀಲ್
4. ಡಾ. ಶರಣಪ್ರಕಾಶ್ ಪಾಟೀಲ್
5.ಎಂ.ವೈ ಪಾಟೀಲ್
ಇನ್ನು, ಮೈಸೂರು ಜಿಲ್ಲೆಯಲ್ಲಿಯೂ 11 ಕ್ಷೇತ್ರಗಳ ಪೈಕಿ 8 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಅವರಲ್ಲಿ ಇಬ್ಬರು ಸಚಿವಾಕಾಂಕ್ಷಿಯಾಗಿದ್ದಾರೆ.
1. ತನ್ವಿರ್ ಸೇಠ್
2. ಎಚ್.ಸಿ ಮಹದೇವಪ್ಪ
ಜೊತೆಗೆ, ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿ
ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ
ಬಬಲೇಶ್ವರ ಶಾಸಕ ಎಂ.ಬಿ ಪಾಟೀಲ್
ಮಂಗಳೂರು ಶಾಸಕ ಯು.ಟಿ ಖಾದರ್
ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ
ನಾಗಮಂಗಲ ಶಾಸಕ ಚಲುವರಾಯಸ್ವಾಮಿ
ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ
ದೇವನಹಳ್ಳಿ ಶಾಸಕ ಕೆ.ಎಚ್ ಮುನಿಯಪ್ಪ
ಕೆಜಿಎಫ್ ಶಾಸಕಿ ರೂಪಕಲಾ
ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ
ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ
ಗದಗ ಶಾಸಕ ಎಚ್.ಕೆ ಪಾಟೀಲ್ ಕೂಡ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಿಷ್ಟು ಮಂತ್ರಿಗಿರಿಯ ರೇಸ್‌ನಲ್ಲಿ ಮುನ್ನಲೆಯಲ್ಲಿರುವ ಹೆಸರುಗಳು. ಇವರಲ್ಲದೆ ಇನ್ನೂ ಹಲವರು ಸಚಿವ ಸ್ಥಾನ ನಮಗೂ ಬೇಕು ಎನ್ನುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕಿದೆ. ಆದರೆ, ಚುನಾವಣೆಗೂ ಮುನ್ನ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗದ ಕಾಂಗ್ರೆಸ್, ಈಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಮುಖ್ಯಮಂತ್ರಿ ಹುದ್ದೆಗಾಗಿ ಇಬ್ಬರು, ಮಂತ್ರಿಗಿರಿಗಾಗಿ ಹಲವರು ಪೈಪೋಟಿ ನಡೆಸುತ್ತಿದ್ದಾರೆ. ಅಂತಿಮವಾಗಿ ಯಾರು ಮುಖ್ಯಮಂತ್ರಿಯಾಗ್ತಾರೆ, ಯಾರು ಸಚಿವರಾಗ್ತಾರೆ ಸದ್ಯದಲ್ಲೇ ತಿಳಿಯಲಿದೆ.