- ‘ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಪ್ರಣಾಳಿಕೆ ಬಿಡುಗಡೆ
- ʼಪರಮೇಶ್ವರ್ ನೇತೃತ್ವದ ಸಮಿತಿ ತಯಾರಿಸಿದ ಪ್ರಣಾಳಿಕೆ ಜನರಿಗೆ ನಿರಾಳತೆ ನೀಡಲಿದೆʼ
ನನಗೆ ಬೇರೆ ರಾಜ್ಯಗಳಿಂದ ದೂರವಾಣಿ ಕರೆ ಮತ್ತು ಪತ್ರ ಬರುತ್ತಿದ್ದು, ನಿಮ್ಮ ಗ್ಯಾರಂಟಿ ಕಾರ್ಡ್ ಹೆಚ್ಚು ಪರಿಣಾಮಕಾರಿಯಾಗಿದೆ. ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಜನ. ಪ್ರಣಾಳಿಕೆ ಭರವಸೆ ಈಡೇರಿಸುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ನಮ್ಮ 150 ಕ್ಷೇತ್ರಗಳ ಗುರಿಯನ್ನು ಕಾಂಗ್ರೆಸ್ ತಲುಪಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ‘ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ಯನ್ನು ಬೆಂಗಳೂರಿನಲ್ಲಿ ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದರು.
ಪರಮೇಶ್ವರ್ ನೇತೃತ್ವದ ಸಮಿತಿ ಅತ್ಯುತ್ತಮ ಪ್ರಣಾಳಿಕೆ ತಯಾರಿಸಿದೆ. ಇದು ಜನರಿಗೆ ನಿರಾಳತೆ ನೀಡಲಿದೆ. ಕಾಂಗ್ರೆಸ್ ನುಡಿದಂತೆ ನಡೆಯುತ್ತಾ ಬಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ನಾವು 165 ಭರವಸೆ ನೀಡಿ 158 ಭರವಸೆ ಈಡೇರಿಸಿದ್ದೇವೆ. ಆದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಮ್ಮ ಪ್ರಣಾಳಿಕೆ ಜಾರಿ ಮಾಡಲು ಪ್ರಾಮಾಣಿಕತೆ ತೋರಲಿಲ್ಲ” ಎಂದರು.
“ನಮ್ಮ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ 200 ಯುನಿಟ್ ವಿದ್ಯುತ್ ಉಚಿತ, ಯುವನಿಧಿ ಮೂಲಕ ಪದವೀಧರರಿಗೆ 3,000 ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ಮಾಸಿಕ ನಿರುದ್ಯೋಗ ಭತ್ಯೆ. ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆ ಹಾಗೂ ಕೇಂದ್ರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇದ್ದರೂ ತುಂಬುತ್ತಿಲ್ಲ. ಹೀಗಾಗಿ ನಿರುದ್ಯೋಗ ಭತ್ಯೆ ನೀಡಲು ತೀರ್ಮಾನಿಸಿದ್ದೇವೆ” ಎಂದು ಹೇಳಿದರು.
“ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತ. ಗೃಹಲಕ್ಷ್ಮಿ ಯೋಜನೆ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಪ್ರತಿ ತಿಂಗಳು ಮನೆಯೊಡತಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಪ್ರೋತ್ಸಾಹ ಧನ. ಇನ್ನು ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ. ಇದನ್ನು ನಾವು ಖಂಡಿತವಾಗಿ ಜಾರಿ ಮಾಡುತ್ತೇವೆ ಎಂದು ನಾನು ಗ್ಯಾರಂಟಿ ನೀಡುತ್ತೇನೆ. ಇದನ್ನು ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡಲಾಗುವುದು” ಎಂದು ಭರವಸೆ ನೀಡಿದರು.
“ನಮ್ಮ ಸರ್ಕಾರ ಇದ್ದಾಗ ಅನೇಕ ಕಲ್ಯಾಣಕಾರಿ ಯೋಜನೆ ಕೈಗೊಂಡಿದ್ದೇವೆ. SCP TSP ಕಾಯ್ದೆ ಮಾಡಿದ್ದು, ಬಿಜೆಪಿ ಸರ್ಕಾರ ಅದನ್ನು ಸರಿಯಾಗಿ ಪಾಲಿಸಿಲ್ಲ. ನಮ್ಮ ಸರ್ಕಾರ ಇದನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತೇವೆ” ಎಂದು ಖರ್ಗೆ ತಿಳಿಸಿದರು.
ಎಲ್ಲ ವರ್ಗಕ್ಕೂ ನ್ಯಾಯ
“ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ ಎಂಬ ಶೀರ್ಷಿಕೆ ಇಟ್ಟಿದ್ದು, ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ ಎಂಬ ಘೋಷವಾಕ್ಯವನ್ನು ಇಟ್ಟುಕೊಂಡಿದ್ದೇವೆ. ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಅಭಿವೃದ್ಧಿ ಮನದಲ್ಲಿಟ್ಟುಕೊಂಡು ಯುವಕರು, ಮಹಿಳೆಯರಿಗೆ ಆದ್ಯತೆ ನೀಡಿದ್ದೇವೆ. ಮುಂದಿನ 25 ವರ್ಷಗಳ ದೂರದೃಷ್ಟಿಯೊಂದಿಗೆ ಈ ಪ್ರಣಾಳಿಕೆಯನ್ನು ತಯಾರು ಮಾಡಿದ್ದೇವೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.
“ಈ ಪ್ರಣಾಳಿಕೆ ಜಾರಿಗೆ ಉನ್ನತ ಸಮಿತಿ ರಚಿಸಲಾಗುವುದು. ರಾಜ್ಯದಲ್ಲಿನ ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ತಿಳಿದಿದೆ. ಇದಕ್ಕಾಗಿ ಇರುವ ಕಾನೂನು ಜತೆಗೆ ಹೊಸ ಕಾನೂನು ಜಾರಿ ಮಾಡಿ ಲೋಕಾಯುಕ್ತಕ್ಕೆ ಹೆಚ್ಚಿನ ಶಕ್ತಿ ನೀಡುತ್ತೇವೆ. ತಮಗೆಲ್ಲ ಗೊತ್ತಿರುವಂತೆ, ಹೊಸ ಪಿಂಚಣಿ ವ್ಯವಸ್ಥೆಯಿಂದ ತೊಂದರೆಯಾಗಿದೆ ಎಂದು 6 ಲಕ್ಷ ನೌಕರರು ಮನವಿ ನೀಡಿದ್ದರು. ಇದರ ಜತೆಗೆ ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶದಲ್ಲಿ ಜಾರಿ ಮಾಡಿರುವುದನ್ನು ಗಮನದಲ್ಲಿಟ್ಟುಕೊಂಡು 2006 ರಿಂದ ನೇಮಕಗೊಂಡಿರುವ ಎಲ್ಲ ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯಡಿ ತರಲು ಸಹಾನುಭೂತಿ ನಿರ್ಧಾರ ಮಾಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಭಜರಂಗದಳ ನಿಷೇಧಕ್ಕೆ ಕ್ರಮ
ಎಪಿಎಂಸಿ ಕಾಯ್ದೆ ರದ್ದು
“ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ರದ್ದು ಮಾಡಿ ರೈತರ ಮೇಲೆ ದಾಖಲಾಗಿರುವ ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುವುದು. ವಸತಿ ಸಮಸ್ಯೆಗೆ ತೊಡಕಾಗಿರುವ ಅರಣ್ಯ ಕಾಯ್ದೆ ತಿದ್ದುಪಡಿ ಮಾಡುತ್ತೇವೆ. ಹಾಲಿಗೆ ನೀಡಲಾಗುತ್ತಿದ್ದ ಹಾಲಿನ ಸಬ್ಸಿಡಿಯನ್ನು ಪ್ರತಿ ಲೀಟರ್ ಗೆ 5ರಿಂದ 7 ರೂ.ಗೆ ಹೆಚ್ಚಳ ಮಾಡಿದ್ದೇವೆ” ಎಂದರು.
ಪ್ರತಿ ಕಂದಾಯ ವಿಭಾಗದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಮಾದರಿಯಲ್ಲಿ ಹಾಗೂ ಕಿದ್ವಾಯಿ ಹಾಗೂ ನಿಮ್ಹಾನ್ಸ್ ಮಾದರಿಯ ಕ್ಯಾನ್ಸರ್ ಹಾಗೂ ಮನೋರೋಗ ಆಸ್ಪತ್ರೆಗಳ ನಿರ್ಮಾಣ ಮಾಡುತ್ತೇವೆ. ಎಲ್ಲ ವಸತಿ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ. ಪರಿಶಿಷ್ಟ ಸಮುದಾಯಗಳ, ಲಿಂಗಾಯತರು, ಒಕ್ಕಲಿಗರು, ಅಲ್ಪಸಂಖ್ಯಾತರಿಗೆ ಇರುವ ಮಿಸಲಾತಿ ಮಿತಿಯನ್ನು 50% ನಿಂದ 75% ಗೆ ಏರಿಕೆ ಮಾಡಲು ಕ್ರಮ. ವಾರ್ಷಿಕ 500ನಂತೆ 2,500 ಕೋಟಿ ಮೀಸಲಿಟ್ಟು ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು” ಎಂದು ಪರಮೇಶ್ವರ್ ತಿಳಿಸಿದರು.
“ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣ ಶೇ 50ರಿಂದ ಶೇ 75ಕ್ಕೆ ಏರಿಕೆ ಮಾಡುತ್ತೇವೆ. ನಾವು ಸಂವಿಧಾನದ ಪ್ರಕಾರವೇ ನಡೆದುಕೊಳ್ಳುವವರು. ಎಲ್ಲರಿಗೂ ಮೀಸಲಾತಿ ಕೊಡುತ್ತೇವೆ. ಪ್ರಣಾಳಿಕೆ ಮತಗಳಿಕೆಯ ಸಾಧನ ಅಲ್ಲ. ರಾಜ್ಯದ ವಿಕಾಸ, ಜನರ ಅಭಿವೃದ್ಧಿಗೆ ಇರುವ ಸಾಧನ. ಐದು ವರ್ಷಗಳ ಅವಧಿಯಲ್ಲಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಬಿಜೆಪಿಯವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಕೇವಲ 55 ಭರವಸೆಗಳನ್ನ ಮಾತ್ರ ಈಡೇರಿಸಿದ್ದಾರೆ” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಬದಲಾವಣೆ, ಅಭಿವೃದ್ಧಿ, ಪ್ರಗತಿಗೆ ಸಂಬಂಧಿಸಿದಂತೆ ಇದೊಂದು ಪವಿತ್ರ ದಿನ. ಕಾಂಗ್ರೆಸ್ ಪಕ್ಷ ದಕ್ಷ ಆಡಳಿತಕ್ಕೆ ಬದ್ಧವಾಗಿದೆ. ನಾನು, ಸಿದ್ದರಾಮಯ್ಯ, ಪರಮೇಶ್ವರ್ ಅವರು ಸೇರಿ ರಾಜ್ಯವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು, ರಾಜ್ಯಕ್ಕೆ ಅಂಟಿರುವ ಕಳಂಕ ಹೇಗೆ ತೊಳೆಯಬೇಕು ಎಂದು ಚರ್ಚೆ ಮಾಡಿ ಈ ಪವಿತ್ರ ಗ್ರಂಥವನ್ನು ತಯಾರು ಮಾಡಿದ್ದೇವೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.