ಕಳೆದ ಎರಡು ತಿಂಗಳಿನಿಂದ ದೆಹಲಿಯಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟವನ್ನು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಬೆಂಬಲಿಸಿದೆ. ದೆಹಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬರೆದ ಮನವಿ ಪತ್ರವನ್ನು ಮೈಸೂರು ಜಿಲ್ಲಾಧಿಕಾರಿಗೆ ಸಂಘದ ಕಾರ್ಯಕರ್ತರು ಸಲ್ಲಿಸಿದ್ದಾರೆ.
ಆಗಸ್ಟ್ 28, 2023ರಿಂದ ಸತತವಾಗಿ ದೆಹಲಿಯಲ್ಲಿ 6,500 ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿನಿತ್ಯ ಹೋರಾಟ ನಡೆಸುತ್ತಿದ್ದಾರೆ. ಜೀವನ ಯೋಗ್ಯ ಮತ್ತು ನಿಗದಿತ ವೇತನ ಜಾರಿಗೊಳಿಸಿ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ದೆಹಲಿ ಮುಖ್ಯಮಂತ್ರಿಗಳು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ, ಎಐಯುಟಿಯುಸಿಗೆ ಸಂಯೋಜಿತ ಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮೈಸೂರು ಜಿಲ್ಲಾ ಸಮಿತಿಯಿಂದ, ಮೈಸೂರು ಜಿಲ್ಲಾ ಪದಾಧಿಕಾರಿಗಳು ನಿಯೋಗದಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು. ಈ ವೇಳೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ನಗರ ಸಮಿತಿಯ ಅಧ್ಯಕ್ಷರಾದ ಕಾ. ಸೀಮಾ ಜಿ.ಎಸ್, ಮೈಸೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಮಂಗಳಮ್ಮ, ತಾಲೂಕು ಸಮಿತಿ ಸದಸ್ಯರಾದ ಮಾಲಾ, ಸೌಭಾಗ್ಯ,ಗೌರಮ್ಮ ಮುಂತಾದವರು ಭಾಗವಹಿಸಿದ್ದರು.