ಮಂಡ್ಯ, ಮೈಸೂರು ಮತ್ತು ಬೆಂಗಳೂರಿಗರ ಜೀವನಾಡಿ ಶ್ರೀರಂಗಪಟ್ಟಣದಲ್ಲಿರುವ ಕನ್ನಂಬಾಡಿ ಅಣೆಕಟ್ಟು ಹೊಸ ಇತಿಹಾಸ ನಿರ್ಮಿಸಿದೆ. ಜನವರಿಯಲ್ಲೂ ಗರಿಷ್ಠ 124 ಅಡಿ ನೀರು ಸಂಗ್ರಹಣೆ ಮೂಲಕ ದಾಖಲೆ ಬರೆದಿದೆ.
ಕೃಷ್ಣರಾಜಸಾಗರ ಜಲಾಶಯ ನಿರ್ಮಾಣ ಮಾಡಿದ ಬಳಿಕ ಮೊಟ್ಟಮೊದಲ ಬಾರಿಗೆ ಈ ದಾಖಲೆ ನಿರ್ಮಾಣವಾಗಿದೆ. ಕಳೆದ 156 ದಿನಗಳಿಂದ ನಿರಂತರವಾಗಿ 124 ಅಡಿ ಕಾಯ್ದುಕೊಂಡಿದೆ. ಈಗಲೂ ಜಲಾಶಯ ಭರ್ತಿಯಾಗಿರುವ ಕಾರಣ ಈ ಬೇಸಿಗೆಯಲ್ಲಿ ಕಾವೇರಿ ಕೊಳ್ಳದ ಅನ್ನದಾತರು, ವಿಶೇಷವಾಗಿ ಬೆಂಗಳೂರಿಗರಿಗರಿಗೆ ನೀರಿನ ಅಭಾವ ಸೃಷ್ಟಿಯಾಗಲಾರದು. ಈ ಮೂಲಕ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಸರ್ಕಾರ ಮಂಗಳವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬೇಸಿಗೆ ಬೆಳೆ ಬೆಳೆಯಲು ರೈತರಿಗೆ ನೀರೊದಗಿಸುವ ನಿರ್ಧಾರ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಕೇಸರಿಕರಣ, ಪರಿಶುದ್ಧ ಆಟ ಅಂತರ್ಧಾನ
ಎರಡು ವರ್ಷಗಳ ಮಳೆ ಅಭಾವದಿಂದಾಗಿ ತೀವ್ರ ಬರಗಾಲ ಸೃಷ್ಟಿಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಕಾವೇರಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗಿದೆ. ಇದರಿಂದ ಕನ್ನಂಬಾಡಿ ಅಣೆಕಟ್ಟು ಕೂಡ ಭರ್ತಿಯಾಗಿದೆ. ಪ್ರಸಕ್ತ ವರ್ಷ ತಮಿಳುನಾಡಿಗೆ ಬಿಡಬೇಕಾದ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರು ಹರಿದಿದೆ. ಹೀಗಾಗಿ ಈ ಬಾರಿ ಕಾವೇರಿ ಸಮಸ್ಯೆ ಕೂಡ ಇಲ್ಲ, ನೀರಿನ ಅಭಾವ ಕೂಡ ಇಲ್ಲ.
ಜೂನ್ 29ರಂದು ಕೂಡ ಜಲಾಶಯದ ನೀರಿನ ಮಟ್ಟವು 90 ಅಡಿಯಿತ್ತು. ನಂತರ ಕೊಡಗು ಮತ್ತು ವಯನಾಡು ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಲಾಶಯಕ್ಕೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಪರಿಣಾಮ ಜುಲೈ 11ರಂದೇ ಜಲಾಶಯದ ನೀರಿನ ಮಟ್ಟವು 124 ಅಡಿ ದಾಟಿದರೂ ಜುಲೈ. 25ರಂದು ಸಂಪೂರ್ಣ ಭರ್ತಿ ಮಾಡಿಸಲಾಗಿತ್ತು. 2009 ರಲ್ಲಿ 146 ದಿನ, 2022ರಲ್ಲಿ 114 ದಿನ ಡ್ಯಾಂ ಸಂಪೂರ್ಣ ಭರ್ತಿಯಾಗಿತ್ತು.
ಜಲಾಶಯದಲ್ಲಿ 124.30 ಅಡಿವರೆಗೆ ನೀರಿದ್ದು, 48.754 ಟಿಎಂಸಿ ಅಡಿ ನೀರು ಸಂಗ್ರಹಣೆಯಾಗಿದೆ. ಗರಿಷ್ಠ 124.80 ಅಡಿ ಎತ್ತರವುಳ್ಳ ಕನ್ನಂಬಾಡಿ ಕಟ್ಟೆಯು ಗರಿಷ್ಠ 49.452 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ.
