ಸಾಂಸ್ಕೃತಿಕ ನಗರಿ ಮೈಸೂರಿನ ಮೂಲ ನಿವಾಸಿ ಅರಸ ಮಹಿಷಾಸುರನನ್ನು ನೆನೆಯುವ ಮಹಿಷ ದಸರಾ ಹಾಗೂ ಧಮ್ಮ ದೀಕ್ಷೆ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಮಹಿಷ ದಸರಾವನ್ನು ನಡೆಸಬಾರದೆಂದು ಬಿಜೆಪಿ ಸಂಸದ ಪ್ರತಾಪ ಸಿಂಹ ಮತ್ತು ಇತರ ಕೆಲವು ಬಿಜೆಪಿ ಮುಖಂಡರು, ಸಂಘಪರಿವಾರದವರು ಒಡ್ಡಿದ್ದ ಬೆದರಿಕೆಗೆ ಜಗ್ಗದೆ, ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ಮೈಸೂರು ಜಿಲ್ಲೆಯ ಮೂಲೆಮೂಲೆಗಳಿಂದ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಮೈಸೂರಿನ ಮೂಲನಿವಾಸಿ ಮಹಿಷನನ್ನು ಸ್ಮರಿಸುವ ಜೊತೆಗೆ ಬೌದ್ಧಧಮ್ಮ ದೀಕ್ಷೆಯನ್ನು ಸ್ವೀಕರಿಸಿದರು.
ಚಾಮುಂಡಿ ಬೆಟ್ಟ ಮತ್ತು ಮಹಿಷ ಪ್ರತಿಮೆಯ ಬಳಿಗೆ ’ಮಹಿಷ ದಸರಾ ಆಚರಣಾ ಸಮಿತಿ’ ಮತ್ತು ಸಾರ್ವಜನಿಕರು ತೆರಳದಂತೆ ನಿರ್ಬಂಧ ಹೇರಿದ್ದರಿಂದ ಪುರಭವನದ ಎದುರು ಕಾರ್ಯಕ್ರಮ ಆಯೋಜನೆಗೊಂಡಿತ್ತು. ಶುಕ್ರವಾರ ಬೆಳಿಗ್ಗೆ 11.30ರ ವೇಳೆಗೆ ಸಾವಿರಾರು ಜನರು ಹರಿದುಬಂದರು. ಎರಡು ಗಂಟೆಯವರೆಗೂ ಅತ್ತಿತ್ತ ಕದಲದೆ ವೇದಿಕೆ ಕಾರ್ಯಕ್ರಮ ಮುಗಿಯುವವರೆಗೂ ಹಾಜರಿದ್ದರು.
ಪುರಭವನದ ಎದುರಿನಲ್ಲಿ ಇರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ನೂರಾರು ಜನರು ಮಾಲಾರ್ಪಣೆ ಮಾಡಿದರು. ಜೈಭೀಮ್, ಜೈ ಮಹಿಷಾಸುರ ಘೋಷಣೆಯು ಅಂಗಳದಲ್ಲಿ ಮಾರ್ದನಿಸಿತು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಉರಿಲಿಂಗಿಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, “ಪಕ್ಷಾತೀತವಾಗಿ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಮನುವಾದಿ ಪಕ್ಷದಲ್ಲಿದ್ದ ನಮ್ಮ ಅಣ್ಣತಮ್ಮಂದಿರು ಕೂಡ, ಸ್ವಾಭಿಮಾನಕ್ಕೆ ಧಕ್ಕೆಯಾದರೆ ತಮ್ಮ ಚಪ್ಪಲಿಯನ್ನೂ ಅಲ್ಲಿ ಬಿಡಲ್ಲ ಎಂಬ ಸಂದೇಶ ನೀಡಲು ಇಲ್ಲಿಗೆ ಆಗಮಿಸಿದ್ದಾರೆ. ತಾವು ಸ್ವಾಭಿಮಾನಿ ಸಿಂಹದ ಮರಿಮೊಮ್ಮಕ್ಕಳು ಎಂಬುದನ್ನು ಸಾಬೀತು ಮಾಡಿದ್ದಾರೆ” ಎಂದು ಬಣ್ಣಿಸಿದರು.
ಬೆದರಿಕೆ ಒಡ್ಡಿದ್ದ ಪ್ರತಾಪ ಸಿಂಹ ಅವರ ಹೆಸರನ್ನು ಉಲ್ಲೇಖಿಸದೆ ತಿರುಗೇಟು ನೀಡಿದ ಅವರು, “ನಾವು ಮೈತ್ರಿ, ಪ್ರೀತಿ, ಮಮತೆಯನ್ನು ಕಲಿತವರು. ನಾನೊಬ್ಬರಿಗೆ ಧನ್ಯವಾದವನ್ನು ಹೇಳಲು ಬಯಸುತ್ತೇನೆ. ರಾಜ್ಯದ ಸ್ವಾಭಿಮಾನಿಗಳೆಲ್ಲ ಒಂದು ಕಡೆ ಸೇರಲು ಅವರು ಕಾರಣವಾಗಿದ್ದಾರೆ. ಅದಕ್ಕಾಗಿ ಧನ್ಯವಾದಗಳು. ನಮ್ಮ ಶಕ್ತಿಗೆ ಸಹಕಾರ ಮಾಡಿದ್ದೀರಿ. ನಿಮ್ಮಿಂದಾಗಿ ಇಡೀ ರಾಜ್ಯ, ಇಡೀ ದೇಶವೇ ಮಹಿಷ ಮಂಡಲದ ಕಡೆಗೆ ಮುಖ ಮಾಡಿದೆ” ಎಂದು ತಿಳಿಸಿದರು.
“ಇವರು ಮಲೆಮಹದೇಶ್ವರ, ಆದಿಚುಂಚನಗಿರಿಗೆ ಹೋಗಿ ಗೊಂದಲ ಸೃಷ್ಟಿಸುತ್ತಾರೆಂದು ಒಬ್ಬ ಜನಪ್ರತಿನಿಧಿಯಾಗಿ ಮಾತನಾಡಿದ್ದಾರೆ. ಇಡೀ ದೇಶಕ್ಕೆ ತಪ್ಪು ಸಂದೇಶವನ್ನು ನೀಡಿದ್ದಾರೆ. ನಾವು ಯಾವುದೇ ಕಾರಣಕ್ಕೂ ಇತಿಹಾಸವನ್ನು ತಿರುಚುವುದಿಲ್ಲ” ಎಂದರು.
“ಸಕಲ ಚರಾಚರ ವಸ್ತುಗಳಲ್ಲೂ ದೇವರಿದ್ದಾನೆ ಎಂದಿದ್ದು ಯಾವ ಧರ್ಮ? ಆ ಕಂಬದಲ್ಲಿ ಇರುವನೇ? ಅಲ್ಲಿಯೂ ಇರುವನು. ಈ ಕಂಬದಲ್ಲಿ ಇರುವನೇ? ಇಲ್ಲಿಯೂ ಇರುವನು ಎನ್ನುತ್ತೀರಿ. ಹಾಗಾದರೆ ಮಹಿಷನಲ್ಲಿ ಯಾರಿದ್ದಾನೆ? ಎಂತಹ ಡೋಂಗಿತನ ನಿಮ್ಮದು? ನಿಮ್ಮ ಡೋಂಗಿತನವನ್ನು ನಮ್ಮೆದುರು ಪ್ರದರ್ಶನ ಮಾಡಬೇಡಿ. ನಾವು ಭೀಮನ ಮಕ್ಕಳು, ಇತಿಹಾಸ ಬಲ್ಲವರು” ಎಂದು ಗುಡುಗಿದರು.
ಪ್ರತಿ ವರ್ಷ ಮಹಿಷ ಮಂಡಲದಲ್ಲಿ ದಮ್ಮದೀಕ್ಷೆ ಕಾರ್ಯಕ್ರಮ, ಮಹಿಷಾ ಉತ್ಸವವನ್ನು ಮಾಡುತ್ತೇವೆ. ನಾವು ರಚಿಸಿರುವ ಸರ್ಕಾರ ನಮಗೆ ಅನುಮತಿಯನ್ನು ಕೊಟ್ಟಿದೆ. ಒಂದು ತೊಟ್ಟು ರಕ್ತವನ್ನು ಕೆಡವದೆ ಭಾರತದ ಜನರಿಗೆ ಬದುಕು ಕೊಟ್ಟ ಪೆನ್ನು- ಡಾ.ಬಿ.ಆರ್.ಅಂಬೇಡ್ಕರ್. ಪ್ರಧಾನಿಯಿಂದ ಹಿಡಿದು ಪಿಡಿಒವರೆಗೂ ನಡೆಯುವುದು ನಮ್ಮ ಅಂಬೇಡ್ಕರ್ ಪೆನ್ನೇ ಹೊರತು, ನಿಮ್ಮ ಮನುವಾದಿಗಳ ಪೆನ್ನಲ್ಲ. ನಾವು ಪೆನ್ನಿನ ಭಾರತವನ್ನು ಕಟ್ಟಿದ್ದೇವೆ, ಗನ್ನಿನ ಭಾರತವನ್ನಲ್ಲ. ನಾವು ಸಂಘರ್ಷಕ್ಕೆ ಹೋಗಲ್ಲ. ಅಂಗುಲಿಮಾಲನನ್ನು ಪರಿವರ್ತನೆ ಮಾಡಿದ ಬೌದ್ಧದಮ್ಮ ನಮ್ಮದು” ಎಂದು ಹೇಳಿದರು.
ಇತಿಹಾಸ ತಜ್ಞರಾದ ತಲಕಾಡು ಚಿಕ್ಕರಂಗೇಗೌಡ ಅವರು ಮಾತನಾಡಿ, “ತಲಕಾಡು ಗಂಗರ ಶಾಸನ ಧಾರವಾಡದ ಕೊಡಲೂರಿನಲ್ಲಿ ಸಿಕ್ಕಿದೆ. ಅದರಲ್ಲಿ ಮೊಟ್ಟಮೊದಲಿಗೆ ಮಹಿಸೂರು ಹೆಸರು ಉಲ್ಲೇಖಗೊಂಡಿದೆ. ಭಾಗವತಿಯ ದಿಣ್ಣೆ ಎಂಬ ಹೆಸರೂ ಅದರಲ್ಲಿ ದಾಖಲಾಗಿದೆ. ಈಗಿನ ಚಾಮುಂಡಿ ಬೆಟ್ಟವೇ ಭಾಗವತಿಯ ದಿಣ್ಣೆ. ಕ್ರಿ.ಶ. ಮೂರನೇ ಶತಮಾನದಲ್ಲಿ ಗುಪ್ತರ ಮೂಲಕ ವೈಷ್ಣವ ಪರಂಪರೆ ಇಲ್ಲಿಗೆ ಬರುತ್ತದೆ. ಅದರಲ್ಲಿ ಭಾಗವತಿ ಎಂಬಾಕೆ ಪ್ರಮುಖಳು. ಆಕೆಯ ಬೆಟ್ಟ ಇದಾಗಿರುತ್ತದೆ” ಎಂದು ಇತಿಹಾಸ ಬಿಚ್ಚಿಟ್ಟರು.
“ಮಹಿಳೆಯರು ಮಾಡುತ್ತಿದ್ದ ದಾನದ ಬಗ್ಗೆ ಮತ್ತೊಂದು ಶಾಸನ ಹೇಳುತ್ತದೆ. ಅಂದರೆ ಮಹಿಷನ ಕಾಲದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನಗಳಿದ್ದವು. ದಾನ, ಧರ್ಮ ಮಾಡುವ ಮಹಿಳೆಯರಿದ್ದರು ಎಂದರೆ ಇದು ಶ್ರೀಮಂತ ರಾಜ್ಯ. ಮಹಿಷ ಎಂದಿಗೂ ಮಹಿಳಾ ಪೀಡಿಕನಲ್ಲ, ಉದ್ಧಾರಕ ಎಂಬುದನ್ನು ಶಾಸನಗಳು ಹೇಳುತ್ತವೆ” ಎಂದು ವಿವರಿಸಿದರು.
ಧರ್ಮಗುರು ಬೋದಿದತ್ತ ಬಂತೇಜಿ ಮಾತನಾಡಿ, “ಮಹಿಷ ಮಂಡಲದ ಬಗ್ಗೆ ಥೈಲ್ಯಾಂಡ್, ಶ್ರೀಲಂಕಾ, ಕಾಂಬೋಡಿಯಾ, ಇಂಡೋನೇಷಿಯ, ಮಲೇಷಿಯ, ಜಪಾನ್, ಜರ್ಮನಿ ದೇಶಗಳಲ್ಲಿ ಉಲ್ಲೇಖಗಳಿವೆ. ಈ ಹೆಸರು ಎಲ್ಲಿಂದ ಬಂತು ಎಂಬುದು ಮೈಸೂರಿಗರಿಗೇ ಗೊತ್ತಿಲ್ಲ” ಎಂದು ವಿಷಾದಿಸಿದರು.
“ಪಾಳಿ ಭಾಷೆಯಲ್ಲಿ ’ಷ’ ಅಕ್ಷರ ಇಲ್ಲ. ಬುದ್ಧ ಜಾತಕ ಕತೆಗಳಲ್ಲಿ ಮಹೀಸ ಪದವನ್ನು ಕಾಣಬಹುದು. ಕ್ರಿ.ಶ.581ರಲ್ಲಿ ಬುದ್ಧರು ಸಾವಂತಿಯಲ್ಲಿ ಮಾಡಿದ ಉಪದೇಶವನ್ನು ಗಮನಿಸಬಹುದು. ಮಹೀಸ ಜಾತಕ (278ನೇ ಜಾತಕ) ಎಂಬುದನ್ನು ಗೂಗಲ್‌ನಲ್ಲೇ ಸರ್ಚ್ ಮಾಡಿ ನೋಡಬಹುದು. ಮಹೀಸ ಎಂಬುದು ಕೋಣದ ಹೆಸರು. ಮಹೀಸ ಜಾತಕದಲ್ಲಿ ಭಗವಾನ್ ಬುದ್ಧರು ಒಂದು ಕೋಣದ ಸ್ವರೂಪವಾಗಿದ್ದರು. ಮಹೀಸ ಜಾತಕವು ಮೈಸೂರಿಗೆ ಸಂಬಂಧಪಟ್ಟಿದೆ. ಮೈಸೂರಿನ ಇತಿಹಾಸವು ತ್ರಿಪಿಟಕಗಳಲ್ಲಿ ಉಲ್ಲೇಖಗೊಂಡಿದೆ” ಎಂದು ವಿಶ್ಲೇಷಿಸಿದರು.
ಚಿಂತಕರಾದ ಡಾ.ಜೆ.ಎಸ್.ಪಾಟೀಲ್ ಮಾತನಾಡಿ, “ಬಲಪಂಥೀಯರಲ್ಲಿ ಬುದ್ಧಿಜೀವಿಗಳು, ಚಿಂತಕರು ಎಂಬ ಕಾನ್ಸೆಪ್ಟೇ ಇಲ್ಲ. ಅಲ್ಲಿರುವವರು ಧಂಗೆಕೋರರು, ಸಮಾಜದ ಸೌಹಾರ್ದತೆಯನ್ನು ಕೆಡಿಸುವ ಮನಸ್ಥಿತಿಯವರು. ಅವರಿಗೆ ಅಧ್ಯಯನದ ಕೊರತೆ ಇರುವುದರಿಂದ ನಾವು ಒಂದಿಷ್ಟು ಟ್ರೈನಿಂಗ್ ಕೊಡುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
ಭಾರತದ ಮೊಟ್ಟಮೊದಲ ಸ್ವಾತಂತ್ರ್ಯ ಸಂಗ್ರಾಮ- ಆರ್ಯ ದ್ರಾವಿಡರ ನಡುವೆ ನಡೆಯಿತು. ಎರಡನೇ ಸ್ವಾತಂತ್ರ್ಯ ಸಂಗ್ರಾಮ ಬೌದ್ಧರು ಮತ್ತು ಆರ್ಯರ ನಡುವೆ ಆಯಿತು. ಮೂರನೆಯದ್ದು ಕನ್ನಡ ನೆಲದ ಶರಣರು ಮತ್ತು ಆರ್ಯ ವೈದಿಕರ ನಡುವೆ ಘಟಿಸಿತು ಎಂದು ಇತಿಹಾಸ ಸ್ಮರಿಸಿದರು.
ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ಮಾತನಾಡಿ, “ಈಗ ರಾಜ್ಯದ್ಯಾಂತ ಮಹಿಷ ದಸರಾ ಆಚರಣೆಯಾಗುತ್ತಿದೆ. ಮುಂದಿನ ವರ್ಷದಿಂದ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತೇವೆ” ಎಂದು ಘೋಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ವಹಿಸಿದ್ದರು. ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು, ಮಾಜಿ ಮೇಯರ್ ಪುರುಷೋತ್ತಮ್, ಮಹಿಷ ಮಂಡಲ ಕೃತಿ ಲೇಖಕ ಸಿದ್ದಸ್ವಾಮಿ, ಹೋರಾಟಗಾರ ಕೃಷ್ಣಮೂರ್ತಿ ಚಮರಂ, ಮುಖಂಡರಾದ ಆಲಗೂಡು ಶಿವಕುಮಾರ್, ಜವರಪ್ಪ, ಮರಿದೇವಪ್ಪ, ವಕೀಲ ಮೋಹನ್ ಕುಮಾರ್ ಮೊದಲಾದವರು ವೇದಿಕೆಯಲ್ಲಿ ಹಾಜರಿದ್ದರು.