- ಸಿದ್ದರಾಮಯ್ಯ ನನ್ನ ಬಾಂಧವ್ಯ ಬೇರೆ: ರೇವಣ್ಣ
- ಶಕುನಿಗಳ ಮಾತಿಗೆ ನಾನು ತಲೆಕೆಡಿಸಿಕೊಳ್ಳುವಂತಹ ವ್ಯಕ್ತಿಯಲ್ಲ
ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆಂದು ಯಾರು ಹೇಳಿದ್ದು? ಹಾಸನ ಟಿಕೆಟ್ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಈಗಾಗಲೇ ದೇವೇಗೌಡರ ಬಳಿ ಹೇಳಿದ್ದೇನೆ. ಅದು ನಮ್ಮಿಬ್ಬರಿಗೇ ಗೊತ್ತು. ದೇವೇಗೌಡರೇ ನಮಗೆ ಸುಪ್ರೀಂ ನಾಯಕರು. ಅವರು ಏನು ಹೇಳುತ್ತಾರೋ ಅದಕ್ಕೆ ಬದ್ಧ” ಎಂದರು.
ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಸಿದ್ದರಾಮಯ್ಯ ಮತ್ತು ನನ್ನ ಬಾಂಧವ್ಯ ಬೇರೆ. ದೇವೇಗೌಡರು, ಕುಮಾರಣ್ಣಇಲ್ವಾ, ನಾನೇಕೆ ಕಾಂಗ್ರೆಸ್‌ಗೆ ಹೊಗಲಿ. ʼಹಾಸನದಲ್ಲಿ ಶಕುನಿಗಳು ತಲೆಕೆಡಿಸುತ್ತಿದ್ದಾರೆʼ ಎಂದು ಎಚ್‌ಡಿಕೆ ಹೇಳಿದ್ದಾರೆ. ಶಕುನಿಗಳ ಮಾತಿಗೆ ನಾನು ತಲೆಕೆಡಿಸಿಕೊಳ್ಳುವಂತಹ ವ್ಯಕ್ತಿಯಲ್ಲ. ಯಾರೂ ನನ್ನ-ಕುಮಾರಣ್ಣನನ್ನು ಹೊಡೆದಾಡಿಸಲು ಸಾಧ್ಯವಿಲ್ಲ. ಬೆಳಗಾವುದರೊಳಗೆ ಒಂದಾಗ್ತಿವಿ” ಎಂದರು.
“ದೇವೇಗೌಡರು ಪ್ರಧಾನಮಂತ್ರಿ, ಮುಖ್ಯಮಂತ್ರಿಯಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಕೆಲವರು ಇವತ್ತು ಚುನಾವಣೆಗೆ ಬಂದರೆ ಮತ್ತೆ ಐದು ವರ್ಷದ ನಂತರ ಇನ್ನೊಂದು ಚುನಾವಣೆ ವೇಳೆ ಬರುತ್ತಾರೆ” ಎಂದು ಟೀಕಿಸಿದರು.
“ಈ ಬಾರಿ 123 ಸೀಟು ಗೆದ್ದು ರಾಜ್ಯದಲ್ಲಿ ನೂರಕ್ಕೆ ನೂರು ನಮ್ಮ ಸರ್ಕಾರ ಬರುತ್ತೆ. ಜೆಡಿಎಸ್ ಬಿಟ್ಟು ಯಾರೂ ಸರ್ಕಾರ ಮಾಡಲು ಆಗಲ್ಲ” ಎಂದು ಭವಿಷ್ಯ ನುಡಿದರು.