- ಹೈಕೋರ್ಟ್ ಮೊರೆ ಹೋದ ಅನಿವಾಸಿ ಕನ್ನಡಿಗರು
- ರಾಯಭಾರಿ ಕಚೇರಿಗಳಿಗೆ ಪತ್ರ ಬರೆಯುವ ಅಭಿಯಾನ
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೇವಲ ಎಂಟು ದಿನಗಳ ಮಾತ್ರ ಬಾಕಿ ಉಳಿದಿದೆ. 80ರ ಮೇಲ್ಪಟ್ಟ ವೃದ್ದರು, ವಿಶೇಷ ಚೇತನರು, ಪತ್ರಕರ್ತರಿಗೆ ಚುನಾವಣಾ ಆಯೋಗ ಬ್ಯಾಲೇಟ್ ಪೇಪರ್ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಸುಮಾರು 5 ಲಕ್ಷ ಅನಿವಾಸಿ ಕನ್ನಡಿಗರ ಈ ಸೇವೆಯಿಂದ ವಂಚಿತರಾಗಿದ್ದಾರೆ.
ತಾವಿದ್ದ ಸ್ಥಳದಿಂದ ಮತ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿ ಕೊಡದ ಕಾರಣ ,5 ಲಕ್ಷ ಮಂದಿ ಅನಿವಾಸಿ ಕನ್ನಡಿಗರು ಮತ ಚಲಾಯಿಸಲು ತಮ್ಮ ತಮ್ಮ ಊರಿಗೆ ಬರಬೇಕಾಗಿದೆ.
ಈ ಹಿಂದೆ ಇಟಲಿ, ಇಂಗ್ಲೆಂಡ್, ಸೌದಿ ಅರೇಬಿಯಾ, ಯುಎಇ ಮತ್ತು ಇತರೆ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಮತಗಟ್ಟೆಗಳನ್ನು ಕೋರಿ ತಮ್ಮ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಿದ್ದರು. ಆದರೆ, ಸರಿಯಾದ ಸ್ಪಂದನೆ ದೊರೆಯದ ಕಾರಣ ಅನಿವಾಸಿ ಕನ್ನಡಿಗರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಮಂಗಳವಾರ ನಡೆಯಲಿದೆ.
ಸಾಗರೋತ್ತರ ಕನ್ನಡಿಗರು ಒಂದು ಸಂಘ ಮಾಡಿಕೊಂಡಿದ್ದು, ಇಂಗ್ಲೆಂಡ್‌ನಲ್ಲಿ ಅದನ್ನು ನೋಂದಾಯಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿಯ ‘ಜನತಾ ಪ್ರಣಾಳಿಕೆ’ಯನ್ನು ಜನರೇ ಅನುಷ್ಠಾನಕ್ಕೆ ತರಬೇಕು ಹೊರತು ಸರ್ಕಾರವಲ್ಲ: ಸಿದ್ದರಾಮಯ್ಯ ಲೇವಡಿ
“ನಾವು ಮತದಾನ ಮಾಡಲು ಭಾರತಕ್ಕೆ ಬರಬೇಕಾದರೆ ಹೆಚ್ಚು ವೆಚ್ಚ ತಗುಲುತ್ತದೆ. ಚುನಾವಣಾ ಆಯೋಗವಾಗಲಿ ಸರ್ಕಾರವಾಗಲಿ ನಮ್ಮ ಮತದಾನಕ್ಕೆ ಪ್ರೋತ್ಸಹಿಸುವುದಿಲ್ಲ” ಎಂದು ಸಾಗರೋತ್ತರ ಕನ್ನಡಿಗರ ಜಂಟಿ ಕಾರ್ಯದರ್ಶಿ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ನಮೂನೆ-6ಎನಲ್ಲಿ ನಮ್ಮ ಹೆಸರನ್ನು ಸಾಗರೋತ್ತರ ಕನ್ನಡಿಗ ಎಂದು ನೋಂದಾಯಿಸಲು ಅವಕಾಶವಿದ್ದರೂ, ನಾವು ಕೆಲಸ ಮಾಡುವ ದೇಶಗಳಲ್ಲಿ ಅಂಚೆ ಮತದಾನ ಅಥವಾ ಬೂತ್ ಅನ್ನು ಒದಗಿಸುವುದಿಲ್ಲ. ಹೀಗಾಗಿ ನಾವು ಹೈಕೋರ್ಟ್ ಮೊರೆ ಹೋಗಿದ್ದೇವೆ” ಎಂದು ತಿಳಿಸಿದ್ದಾರೆ.
ದುಬೈನಿಂದ ಬಾಗಲಕೋಟೆಯ ಬನಹಟ್ಟಿಗೆ ಬಂದಿರುವ ಸಂಘದ ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ, ಅನಿವಾಸಿ ಕನ್ನಡಿಗರು ತಮ್ಮ ತಮ್ಮ ರಾಯಭಾರಿ ಕಚೇರಿಗಳಿಗೆ ಮನವಿ ಪತ್ರ ಸಲ್ಲಿಸುವ ಅಭಿಯಾನ ಆರಂಭಿಸಿದ್ದಾರೆ.
“ಅನಿವಾಸಿ ಕನ್ನಡಿಗರಲ್ಲಿ ಮೂರು ವಿಧವಿದೆ. ಕೆಲಸ ಮಾಡುವವರು, ಅವಲಂಭಿತರು ಹಾಗೂ ವಿದ್ಯಾರ್ಥಿಗಳು. ಅಲ್ಜೀರಿಯಾ, ಫಿಲಿಪೈನ್ಸ್, ಇಟಲಿ ಮತ್ತು ರೊಮೇನಿಯಾದಂತಹ ದೇಶಗಳು ತಮ್ಮ ರಾಯಭಾರಿ ಕಚೇರಿಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿವೆ. ಹೀಗಿರುವಾಗ ಸುಮಾರು 60 ಲಕ್ಷ ಅನಿವಾಸಿ ಭಾರತೀಯರಿಗೆ ಏಕೆ ಸಾಧ್ಯವಾಗುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.