ರಾಜ್ಯದಲ್ಲಿ ಬುಧವಾರ ಮತದಾನ ನಡೆದಿದೆ, ಅಂದೇ ಸಂಜೆ ವೇಳೆಗೆ ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಮೂರು ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತ ಬರುತ್ತದೆ ಎಂದು ಹೇಳಿದರೆ, ಒಂದು ಸಮೀಕ್ಷೆ ಬಿಜೆಪಿಗೆ ಸರಳ ಬಹುಮತ ದೊರೆಯುವುದಾಗಿ ಹೇಳಿದೆ. ಈ ನಡುವೆ, ಬಹುಮತಕ್ಕಿಂತ ಕಡಿಮೆ ಸಂಖ್ಯೆ ಬಂದರೆ, ಸರ್ಕಾರ ರಚನೆಗೆ ಬಿಜೆಪಿ ತಂತ್ರ ರೂಪಿಸುತ್ತಿದೆ ಎನ್ನಲಾಗಿದ್ದು, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಪ್ರತಿತಂತ್ರ ಹೆಣೆಯುತ್ತಿದೆ ಎಂದು ತಿಳಿದುಬಂದಿದೆ.
ಕರ್ನಾಟಕ ವಿಧಾನಸಭೆಯಲ್ಲಿ 224 ಸಂಖ್ಯಾಬಲವಿದ್ದು, ಸರ್ಕಾರ ರಚನೆಗೆ ಕನಿಷ್ಟ 113 ಸ್ಥಾನಗಳನ್ನು ಯಾವುದೇ ಪಕ್ಷ ಗಳಿಸಬೇಕು. ಅಷ್ಟು ಸಂಖ್ಯೆಯನ್ನು ಗೆಲ್ಲಲಾಗದಿದ್ದರೆ ಬಿಜೆಪಿ ‘ಆಪರೇಷನ್ ಕಮಲ’ ನಡೆಸಿ, ಬೇರೆ ಪಕ್ಷಗಳ ಶಾಸಕರನ್ನು ಪಕ್ಷಾಂತರದ ಮೂಲಕ ತಮ್ಮತ್ತ ಕರೆತರುತ್ತದೆ ಎಂದು ಹೇಳಲಾಗುತ್ತಿದೆ. ಕೇಸರಿ ಪಡೆಯನ್ನು ಕಟ್ಟಿಹಾಕಲು ಕಾಂಗ್ರೆಸ್ ಕೂಡ ‘ಆಪರೇಷನ್ ಹಸ್ತ’ ನಡೆಸಲಿದೆ ಎನ್ನಲಾಗಿದೆ.
ಈ ಬಾರಿಯೂ ಕಿಂಗ್ ಮೇಕರ್ ಆಗಿ ಹೊರಹೊಮ್ಮುವ ಸಾಧ್ಯತೆಗಳನ್ನು ಜೆಡಿಎಸ್ ಎದುರು ನೋಡುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ನಡೆಯನ್ನು ಗಮನಿಸುತ್ತಲೇ ತನ್ನ ಶಾಸಕರನ್ನು ಒಟ್ಟಿಗೆ ಒಂದೆಡೆ ಹಿಡಿದಿಟ್ಟುಕೊಳ್ಳಲು ತಂತ್ರ ರೂಪಿಸುತ್ತಿದೆ.
ಜೆಡಿಎಸ್ 2018ರ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ನಿರೀಕ್ಷೆಯಲ್ಲಿದೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದರೊಂದಿಗೆ ಮೈತ್ರಿ ಮಾಡಿಕೊಳ್ಳಲು ಚಿಂತಿಸುತ್ತಿದೆ. ಆದರೆ, ಅದು ಹೊಸದಾಗಿ ಚುನಾಯಿತರಾಗುವ ಶಾಸಕರು ಪಕ್ಷಾಂತರವಾಗದಂತೆ ತಡೆಯಲು ಪ್ರಯತ್ನಿಸುತ್ತಿದೆ.
“ಸರ್ಕಾರ ರಚಿಸಲು ಬೇಕಾದ ಸಂಖ್ಯಾಬಲ ಸಿಗದ ಕಾರಣ ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ಶಾಸಕರನ್ನು ಸೆಳೆಯಲು ಖಂಡಿತವಾಗಿಯೂ ಪ್ರಯತ್ನಿಸುತ್ತವೆ. ನಾವು ಜಾಗರೂಕರಾಗಿದ್ದೇವೆ. ನಮ್ಮ ಶಾಸಕರನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುತ್ತೇವೆ. ಈ ಸಮದಯಲ್ಲಿ, ನಮ್ಮ ಸಹಾಯವಿಲ್ಲದೆ ಯಾವುದೇ ಪಕ್ಷವು ಸರ್ಕಾರವನ್ನು ರಚಿಸಲು ಸಾಧ್ಯವಾಗುವುದಿಲ್ಲ” ಎಂದು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
“ಕಾಂಗ್ರೆಸ್ 150ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದರೆ, ನಮ್ಮ ಪಕ್ಷವನ್ನು ಒಡೆಯಲು ಬಿಜೆಪಿ ಪ್ರಯತ್ನಿಸುತ್ತದೆ. ಆದರೆ, ನಿರೀಕ್ಷಿಸಿರುವಷ್ಟು ಫಳಿತಾಂಶ ಬರದಿದ್ದರೆ, ಕಾಂಗ್ರೆಸ್ ಕೂಡ ತಂತ್ರ ರೂಪಿಸಿದೆ. ಬಿಜೆಪಿ ಮತ್ತು ಜೆಡಿಎಸ್‌ನ ಸಂಭಾವ್ಯ ವಿಜೇತರೊಂದಿಗೆ ಈಗಾಗಲೇ ಮಾತುಕತೆ ನಡೆಯುತ್ತಿದೆ” ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
“ನಮಗೆ ಸ್ಪಷ್ಟ ಬಹುಮತ ಸಿಗುವ ವಿಶ್ವಾಸವಿದ್ದರೂ, ಪ್ರತಿಸ್ಪರ್ಧಿ ಪಕ್ಷಗಳ ಶಾಸಕರನ್ನು ಎಳೆದೊಯ್ದು ಅನೈತಿಕ ಮಾರ್ಗದ ಮೂಲಕ ಬಿಜೆಪಿ ಸರ್ಕಾರ ರಚಿಸುವುದನ್ನು ತಡೆಯಲು ನಾವು ಸಾಕಷ್ಟು ಜಾಗರೂಕರಾಗಿರಬೇಕು. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈಗ ಬಿಜೆಪಿಯ ಕುತಂತ್ರ ನಡೆಯುವುದಿಲ್ಲ” ಎಂದು ರಾಜ್ಯ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚುನಾವಣೋತ್ತರ ಸಮೀಕ್ಷೆ | ಕಾಂಗ್ರೆಸ್‌ಗೆ ರಾಜ್ಯದ ಅಧಿಕಾರ!
2018ರಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಒಂಬತ್ತು ಸ್ಥಾನಗಳಿಂದ ಬಹುಮತಕ್ಕೆ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಉರುಳಿಸಿತು. 2019ರಲ್ಲಿ ಬಿಜೆಪಿ ಸರ್ಕಾರ ರಚಿಸಿತ್ತು.
ಈ ಬಾರಿಯೂ ಬಿಜೆಪಿ ಇಂತದ್ದೇ ತಂತ್ರದಲ್ಲಿ ನಿರತವಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ, “ನಮಗೆ ಸ್ಪಷ್ಟ ಬಹುಮತ ಸಿಗುವುದರಿಂದ ಬೇರೆ ಪಕ್ಷಗಳ ಶಾಸಕರನ್ನು ಸೇರಿಸಿಕೊಳ್ಳುವ ಅಗತ್ಯ ಬಿಜೆಪಿಗೆ ಬರುವುದಿಲ್ಲ. ‘ಆಪರೇಷನ್ ಹಸ್ತ’ವನ್ನು ಜಾರಿಗೆ ತರುವ ಕಾಂಗ್ರೆಸ್‌ನ ತಂತ್ರ ಕೇವಲ ಒಂದು ಕನಸಾಗಿರುತ್ತದೆ. ಅವರು ನಮ್ಮ ಯಾವುದೇ ಶಾಸಕರನ್ನು ಸೆಳೆಯಲು ಸಾಧ್ಯವಾಗುವುದಿಲ್ಲ” ಎಂದು ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.